ಕಲಬುರಗಿ: ನಂಜುಂಡಪ್ಪ ಸಮಿತಿ ಜಾರಿ ಮಾಡಿದ ಶಿಫಾರಸುಗಳು ಜಾರಿಗೆ ಬರದೆ ಕೆಲ ದಾಖಲಾತಿಗಲ್ಲಿ ಮಾತ್ರ ಜಾರಿಗೆ ಬಂದಿರುವುದು ವಿಷಾದನೀಯ ವಿಷಯ ಎಂದು ಹಂಪಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹಾಗೂ ಸಾಹಿತಿ ಡಾ. ಶ್ರೀನಿವಾಸ್ ಸಿರನೂರಕರ ಬೇಸರ ವ್ಯಕ್ತಪಡಿಸಿದರು.
ಗುಲ್ಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ಗೋಷ್ಠಿಯಲ್ಲಿ 371(ಜೆ) ಕಲಂನ ಅನುಷ್ಠಾನ ಮತ್ತು ಅಡಚಣೆಗಳ ವಿಷಯದ ಕುರಿತು ಅವರು ಮಾತನಾಡಿದರು. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಒಟ್ಟು 12 ಸಮಿತಿಗಳನ್ನು ರಚನೆ ಮಾಡಿದ್ದಾರೆ. ಆದರೆ, ಈವರೆಗೂ ಒಂದು ಸಮಿತಿ ಶಿಫಾರಸುಗಳನ್ನು ಅಳವಡಿಸಿಕೊಳ್ಳದೆ ಕೇವಲ ಅಕ್ಷರದ ರೂಪ ನೀಡಿದ್ದಾರೆ. ಕರ್ನಾಟಕ ಸಚಿವ ಸಂಪುಟದಲ್ಲಿ ಉತ್ತರ ಕರ್ನಾಟಕ ಭಾಗದವರಿಗೆ ಸಮಾನ ಅವಕಾಶ ನೀಡಬೇಕು ಎಂದು ಸಮಿತಿ ಶಿಫಾರಸು ಮಾಡಿದ್ದರು. ಇತ್ತೀಚಿನ ದಿನಗಳಲ್ಲಿ ಉತ್ತರ ಕರ್ನಾಟಕದ 5 ಜಿಲ್ಲೆಗಳಿಗೆ ಸಚಿವರಿಲ್ಲದಿರುವುದು ದುರದೃಷ್ಟಕರ ಸಂಗತಿ ಎಂದರು.
ಅಭಿವೃದ್ಧಿ ತಳ ಮಟ್ಟದಿಂದ ಆದಾಗ ಮಾತ್ರ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರದ ಅಭಿವೃದ್ಧಿಯಾಗಲು ಸಾಧ್ಯವಾಗುತ್ತೆ. ಆದ್ದರಿಂದಾಗಿ ತಾಲೂಕು ಮಟ್ಟದಿಂದ ಅಭಿವೃದ್ಧಿಯಾಗಬೇಕು. ಈ ಭಾಗವು ಬಡತನ, ಶಿಕ್ಷಣ ಲಿಂಗಸಮಾನತೆ, ಮಾನವ ಸಂಪನ್ಮೂಲದಲ್ಲಿ ತುಂಬಾ ಕೆಳಮಟ್ಟದಲ್ಲಿದೆ. ಇದರಲ್ಲಿ ಅಭಿವೃದ್ಧಿ ಹೊಂದುವ ಯೋಜನೆಗಳು ಹಾಕಿಕೊಳ್ಳಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದರು.
ಒಟ್ಟು ರಾಜ್ಯದ 100 ಜನ ಅಕ್ಷರಸ್ಥರಲ್ಲಿ 15 ಜನರು ಇದೇ ಭಾಗದವರಾಗಿದ್ದಾರೆ. 170ರಲ್ಲಿ 39 ತಾಲೂಕುಗಳು ಹಿಂದುಳಿದಿವೆ. ಆದರೆ, ಅದರಲ್ಲಿ ಕಲ್ಯಾಣ ಕರ್ನಾಟಕದ 29 ತಾಲೂಕುಗಳು ತುಂಬಾ ಕಳಪೆ ಮಟ್ಟದಲ್ಲಿವೆ ಎಂದು ಮಾಹಿತಿ ನೀಡಿದರು. ನಂಜುಂಡಪ್ಪ ಸಮಿತಿ ರಚನೆಯಾಗಿ ಇಲ್ಲಿಗೆ 18 ವರ್ಷ ಗತಿಸಿವೆ. ಹೆಚ್ಚು ಪ್ರಾದೇಶಿಕ ಅಭಿವೃದ್ಧಿ ಮಂಡಳಿ ರಚನೆ ಮಾಡಬೇಕು ಎಂದು ಶಿಫಾರಸು ಮಾಡಲಾಗಿತ್ತು. ಆದರೆ, ಅದು ಈವರೆಗೂ ಕಾರ್ಯ ರೂಪಕ್ಕೆ ಬಂದಿಲ್ಲ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ 2015-16 ರಿಂದ 2018-19 ಸಾಲಿನಲ್ಲಿ 4ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ಆದರೆ, ಸರ್ಕಾರದಿಂದ ಬಿಡುಗಡೆ ಮಾಡಿದ್ದು ಅಲ್ಪ ಪ್ರಮಾಣ ಮಾತ್ರ. ಈ ಭಾಗದ ಉನ್ನತಿಗಾಗಿ 371(ಜೆ) ಕಲಂ ಸುಮಾರು ವರ್ಷಗಳ ಹೋರಾಟದ ಫಲವಾಗಿ ಜಾರಿಗೆ ಬಂದಿದೆ. ಅದನ್ನು ಸರ್ಕಾರ ನಿಷ್ಠೆಯಿಂದ ಜಾರಿಗೆ ತರಬೇಕು ಎಂದು ಮನವಿ ಮಾಡಿದರು.