ಕಲಬುರಗಿ: ಕುಮಾರಸ್ವಾಮಿಯವರಿಗೆ ನನ್ನ ಕಂಡರೆ ಭಯ. ಹೀಗಾಗಿ ನನ್ನನ್ನೇ ಟಾರ್ಗೆಟ್ ಮಾಡಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿ ಹೆಚ್ಡಿಕೆ ವಿರುದ್ಧ ಹರಿಹಾಯ್ದರು.
ಕಲಬುರಗಿ ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿಯಾದವರು ಸಾಂವಿಧಾನಿಕ ಹುದ್ದೆಗೆ ಅವಮಾನ ಮಾಡುವುದು ಸರಿಯಲ್ಲ. ವಿರೋಧ ಪಕ್ಷದ ಸ್ಥಾನ ಸಾಂವಿಧಾನಿಕ ಹುದ್ದೆಯಾಗಿದೆ. ಈ ಹಿಂದೆ ದೇವೇಗೌಡರು ಸಹ ವಿರೋಧ ಪಕ್ಷದ ನಾಯಕರಾಗಿದ್ದರು. ಹಾಗಾದ್ರೆ, ದೇವೇಗೌಡರು ನಿರ್ವಹಿಸಿದ್ದ ಹುದ್ದೆ ಕೂಡ ಪುಟಗೋಸಿಯಾ? ಎಂದು ಪ್ರಶ್ನೆ ಮಾಡಿದರು.
ರಾಜಕೀಯದಲ್ಲಿ ಭಯ ಇರುವವರು ಟಾರ್ಗೆಟ್ ಮಾಡುತ್ತಾರೆ. ಕುಮಾರಸ್ವಾಮಿಗೂ ನನ್ನ ಕಂಡ್ರೆ ಭಯ, ಹೀಗಾಗಿ ನನ್ನನ್ನು ಟಾರ್ಗೆಟ್ ಮಾಡ್ತಿದ್ದಾರೆ, ಕಾಲು ಕೆರೆದುಕೊಂಡು ಜಗಳಕ್ಕೆ ಬರ್ತಾರೆ. ನನ್ನ 50 ವರ್ಷದ ರಾಜಕೀಯ ಜೀವನದಲ್ಲಿ ಹೆದರಿಸುವ, ಬೆದರಿಸುವ ಬಹಳಷ್ಟು ಜನರನ್ನು ನೋಡಿದ್ದೇನೆ. ದೇವೆಗೌಡರು ಸಿಎಂ ಆದ್ಮೇಲೆ ಕುಮಾರಸ್ವಾಮಿ ರಾಜಕೀಯಕ್ಕೆ ಬಂದ್ರು, ಇತ್ತೀಚೆಗೆ ರಾಜಕಿಯಕ್ಕೆ ಬಂದವರು. ಇವರಿಂದ ನಾನು ಕಲಿಬೇಕಾ? ಎಂದು ಆಕ್ರೋಶ ಹೊರಹಾಕಿದರು.
'ಕುಮಾರಸ್ವಾಮಿಗೆ ಎರಡು ನಾಲಿಗೆ'
ವ್ಯಕ್ತಿಗೆ ಒಂದೇ ನಾಲಿಗೆ ಇರಬೇಕು, ಎರಡು ನಾಲಿಗೆ ಇರಬಾರದು. ಹಿಂದೆ ಯಡಿಯೂರಪ್ಪ ಆಪರೇಷನ್ ಕಮಲ ಮಾಡಿದ್ರು ಅಂತಾ ಹೆಚ್ಡಿಕೆ ಹೇಳಿದ್ರು. ಈಗ ನನ್ನ ಹೆಸರು ಹೇಳ್ತಿದ್ದಾರೆ. ನನ್ನ ವಿರುದ್ಧ ಜನರನ್ನ ಎತ್ತಿಕಟ್ಟುವುದಕ್ಕೆ ಈ ರೀತಿ ಮಾತನಾಡುತ್ತಿದ್ದಾರೆ. ಆಪರೇಷನ್ ಕಮಲಕ್ಕೆ ಜೆಡಿಎಸ್ ಸದಸ್ಯರು ಒಳಗಾಗುತ್ತಿದ್ದಾರೆ ಅಂತಾ ನಾನು ಫೋನ್ ಮಾಡಿ ಹೇಳಿದ್ರೂ ಕೂಡ ಹೆಚ್ಡಿಕೆ 9 ದಿನ ಅಮೇರಿಕಾದ ವೆಸ್ಟೆಂಡ್ ಹೋಟೆಲ್ನಲ್ಲಿದ್ರು. ಒಬ್ಬ ಮಂತ್ರಿ, ಶಾಸಕರನ್ನು ಭೇಟಿ ಆಗಿಲ್ಲ. ಈ ಕಾರಣಕ್ಕಾಗಿ ಅವರ ಸರ್ಕಾರ ಬಿದ್ದು ಹೋಗಿದೆ. ಈಗ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
'ಯಡಿಯೂರಪ್ಪ ಭೇಟಿ ಸಾಬೀತು ಮಾಡಿದ್ರೆ ರಾಜಕೀಯ ನಿವೃತ್ತಿ'
ಐಟಿ ದಾಳಿ ಕುರಿತು ನನ್ನ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ. ಕುಮಾರಸ್ವಾಮಿ ಬಗ್ಗೆ ನಾನು ಮಾತನಾಡಬಾರದು ಅಂದುಕೊಂಡಿದ್ದೆ. ಬಹಳ ಸಲ ನನ್ನ ಕುರಿತು ವೈಯಕ್ತಿಕವಾಗಿ ಮಾತನಾಡುತ್ತಿರುವುದರಿಂದ ಮಾತನಾಡಬೇಕಾಗಿದೆ. ಬಿಎಸ್ವೈ ಅವರನ್ನು ಹುಟ್ಟುಹಬ್ಬದ ದಿನ ಬಿಟ್ಟರೆ ನಾನು ಮೀಟಿಂಗ್ನಲ್ಲಿ ಭೇಟಿ ಆಗಿದ್ದೇನೆ. ಅಧಿಕಾರದಲ್ಲಿರೋರನ್ನು ವೈಯಕ್ತಿಕವಾಗಿ ನಾನು ಭೇಟಿ ಮಾಡಲ್ಲ. ರಾಜಕೀಯದಲ್ಲಿ ನೀತಿ ನಿಯಮಗಳು ಇರುತ್ತವೆ. ಕುಮಾರಸ್ವಾಮಿ ಬಿಜೆಪಿ ಜೊತೆ ಸೇರಿದ್ರು. ಯಾಕೆ ಸನ್ಯಾಸತ್ವ ಆಗೋದಕ್ಕಾ?. ಪಾರ್ಟಿ ಹೆಸರು ಜೆಡಿಎಸ್ ಸೆಕ್ಯೂಲರ್, ಸರ್ಕಾರ ಮಾಡೋದು ಕಮ್ಯೂನಲ್ ಬಿಜೆಪಿ. ಇಂತವರಿಂದ ನಾವು ಪಾಠ ಕಲಿಯಬೇಕಾ ?. ಒಂದು ವೇಳೆ ಕುಮಾರಸ್ವಾಮಿ, ಯಡಿಯೂರಪ್ಪನವರನ್ನು ನಾನು ಭೇಟಿಯಾಗಿರುವುದನ್ನು ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ತೀರುಗೇಟು ನೀಡಿದರು.