ಕಲಬುರಗಿ: ಸರ್ಕಾರಿ ವೈದ್ಯರಾಗಿ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುವವರನ್ನು ಕೆಲಸದಿಂದಲೇ ತೆಗೆದು ಹಾಕಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಸಾರ್ಕಾರಿ ವೈದ್ಯರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು ಖಾಸಗಿಯಾಗಿ ಕೆಲಸ ಮಾಡುವಂತಿಲ್ಲ. ಒಂದು ವೇಳೆ ಮಾಡಬೇಕೆಂದಿದ್ದರೆ ನೌಕರಿ ಬಿಟ್ಟು ಹೋಗಬಹುದೆಂದು ಎಚ್ಚರಿಕೆ ನೀಡಿದ್ದಾರೆ.
ಪ್ರೈವೇಟ್ ಪ್ರ್ಯಾಕ್ಟಿಸ್ ನಿಷೇಧಿಸಿ ಕಾನೂನು ಜಾರಿಗೆ ತರಲು ಗಂಭೀರ ಚಿಂತನೆ ನಡೆಸಿದ್ದೇವೆ. ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾದವರು 24 ತಾಸುಗಳ ಕಾಲ ಅಲ್ಲೇ ಸೇವೆ ಕೊಡಬೇಕು. ಅದನ್ನು ಬಿಟ್ಟು ಖಾಸಗಿಯಾಗಿ ಪ್ರ್ಯಾಕ್ಟಿಸ್ ಮಾಡ್ತಾರೆ ಅಂದ್ರೆ ಅದನ್ನು ಒಪ್ಪೋಕಾಗುತ್ತೆಯೇ? ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡೋರು ನಮಗೆ ಬೇಡವೇ ಬೇಡ. ಈಗಾಗಲೇ ಸಿಎಂ ಯಡಿಯೂರಪ್ಪ ಅವರು ಕೆಪಿಎಸ್ಸಿ ಬಿಟ್ಟು ನೇರ ನೇಮಕಾತಿ ಮಾಡಲು ಸ್ವಾತಂತ್ರ್ಯ ಕಲ್ಪಿಸಿಕೊಟ್ಟಿದ್ದಾರೆ. ಅಂತದರಲ್ಲಿ ಇವರು ಇಲ್ಲಿ ಸಂಬಳ ತೆಗೆದುಕೊಂಡು, ಅಲ್ಲಿಯೂ ಸಂಬಳ ತೊಗೊಂಡ್ರೆ ಹೇಗೆ? ಸರ್ಕಾರಿ ಆಸ್ಪತ್ರೆ ಬೇಡ ಅನ್ನೋರು ನಮಗೆ ಬೇಕಿಲ್ಲ. ಹಾಗೊಂದು ವೇಳೆ ಮಾಡುವಂತಿದ್ದರೆ ಈಗಲೇ ಕೆಲಸ ಬಿಟ್ಟು ಹೋಗಲಿ ಎಂದಿದ್ದಾರೆ.