ಕಲಬುರಗಿ: ಪೌರತ್ವ ಮಸೂದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಗಲಭೆಯಲ್ಲಿ ಪ್ರತಿಪಕ್ಷಗಳ ಕೈವಾಡವಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಆರೋಪಿಸಿದ್ದಾರೆ.
ಕಲಬುರಗಿಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಗಲಭೆಯ ಹಿಂದೆ ವಿರೋಧ ಪಕ್ಷಗಳ ಪಿತೂರಿ ಅಡಗಿದೆ. ಆದರೆ ಆಡಳಿತ ಪಕ್ಷದ ಮೇಲೆ ಗೂಬೆ ಕೂರಿಸುತ್ತಿವೆ. ವಿರೋಧ ಪಕ್ಷಗಳಿಗೆ ಪ್ರತಿಯೊಂದನ್ನೂ ವಿರೋಧಿಸೋದೆ ಕೆಲಸವಾಗಿದೆ ಎಂದು ಕಿಡಿಕಾರಿದರು.
ವಿರೋಧ ಪಕ್ಷಗಳ ಷಡ್ಯಂತ್ರದಿಂದಲೇ ಮಂಗಳೂರು ಗಲಭೆ ನಡೆದಿದೆ. ಪೌರತ್ವ ಕಾಯಿದೆಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕಿತ್ತು. ಆದರೆ ವಿರೋಧ ಪಕ್ಷಗಳು ಅದನ್ನ ತಿರುಚಿ ಗಲಭೆ ಸೃಷ್ಟಿಸುವಂತೆ ಮಾಡಿದ್ದಾರೆ. ಪ್ರತಿಭಟನೆಯಲ್ಲಿ ಭಾಗಿಯಾಗಿದವರಿಗೆ ಯಾತಕ್ಕಾಗಿ ಪ್ರತಿಭಟನೆ ಮಾಡ್ತಾ ಇದ್ದಿವಿ ಅನ್ನೋದೂ ಗೊತ್ತಿರಲಿಲ್ಲ. ಪ್ರತಿಭಟನೆಗೆ ಬನ್ನಿ ಅಂತ ಕರೆಸಿದ್ರು, ಬಂದಿದ್ದೇವೆ, ನಮಗೇನು ಗೊತ್ತಿಲ್ಲ ಅಂತಾ ಅವರೆ ಹೇಳಿದ್ದಾರೆ. ಗಲಭೆಯಲ್ಲಿ ಸೇರಿದ ಜನರೇ ಈ ಮಾತನ್ನ ಹೇಳಿದ್ದಾರೆ ಎಂದರು.
ವಿರೋಧ ಪಕ್ಷಗಳೇ ಕುತಂತ್ರ ಮಾಡಿರೋ ಕೆಲಸವಿದು. ಪೌರತ್ವ ಕಾಯಿದೆ ವಿಚಾರ ತಿರುಚಿ ಹೇಳೋದು ಸರಿಯಲ್ಲ. ಗಲಭೆಯಲ್ಲಿ ಮೃತಪಟ್ಟ ಇಬ್ಬರು ಯುವಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳೋ ಜೊತೆಗೆ, 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿರುವ ಕುರಿತು ಪ್ರತಿಕ್ರಿಯಿಸಿದ ಜೊಲ್ಲೆ, ಮಾನವೀಯತೆಯ ದೃಷ್ಟಿಯಿಂದ ಮುಖ್ಯಮಂತ್ರಿಗಳು ಪರಿಹಾರ ಪ್ರಕಟಿಸಿದ್ದಾರೆ. ಗಲಭೆ ಸಂಬಂಧ ತನಿಖೆ ನಡೆಯುತ್ತಿದೆ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಎಂದರು.