ಕಲಬುರಗಿ: ಶಾಲಾ ಬಸ್ ಚಾಲಕನೋರ್ವ ಮೂರುವರೆ ವರ್ಷದ ಪುಟ್ಟ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ನಗರದ ಪ್ರತಿಷ್ಠಿತ ಖಾಸಗಿ ಶಾಲೆಯೊಂದರಲ್ಲಿ ನಡೆದಿದೆ.
ಬಿಜೆಪಿಯ ಮಾಜಿ ವಿಧಾನ ಪರಿಷತ್ ಸದಸ್ಯರೊಬ್ಬರ ಪಾಲುದಾರಿಕೆ ಹೊಂದಿರುವ, ನಗರದ ಹೊರವಲಯದಲ್ಲಿರುವ ಪ್ರತಿಷ್ಠಿತ ಖಾಸಗಿ ಶಾಲೆಯಲ್ಲಿ ನಡೆದ ಘಟನೆ ಬೆಳಕಿಗೆ ಬಂದಿದೆ.
ಬಸ್ ಚಾಲಕ ಮೌನೇಶ್ ಪ್ಯಾಟಿ (30) ಎಂಬಾತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿ. ಶಾಲಾ ಮಕ್ಕಳನ್ನು ಪ್ರವಾಸಕ್ಕೆಂದು ಪಾರ್ಕ್‌ಗೆ ಕರೆದುಕೊಂದು ಹೋದ ವೇಳೆ ಬಾಲಕಿಯನ್ನು ಪುಸಲಾಯಿಸಿ ಬಸ್‌ನೊಳಗೆ ಕರೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ತಿಳಿದು ಬಂದಿದೆ.
ಮೌನೇಶ್ ಕಳೆದ ಹಲವು ವರ್ಷಗಳಿಂದ ಬಸ್ ಚಾಲಕನಾಗಿ ಕೆಲಸ ಮಾಡ್ತಿದ್ದ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ, ಶಾಲಾ ಆಡಳಿತ ಮಂಡಳಿ, ಪ್ರಿನ್ಸಿಪಾಲ್ ಹಾಗೂ ಶಿಕ್ಷಕರ ವಿರುದ್ಧವೂ ದೂರು ದಾಖಲಾಗಿದ್ದು, ವಿ.ವಿ.ಠಾಣೆಯ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.