ಸೇಡಂ: ಕೋಟ್ಯಂತರ ಭಕ್ತರ ಆರಾಧ್ಯದೈವ ಯಾನಾಗುಂದಿಯ ಲಿಂ. ಮಾತಾ ಮಾಣಿಕೇಶ್ವರಿ ಅಮ್ಮನವರ ಜನ್ಮದಿನ ಹಾಗೂ ಗುರು ಪೂರ್ಣಿಮೆಯನ್ನು ಕೊರೊನಾ ಹಿನ್ನೆಲೆಯಲ್ಲಿ ಭಕ್ತರು ಮನೆಯಲ್ಲೇ ಆಚರಿಸುವಂತೆ ಮಾತಾ ಮಾಣಿಕೇಶ್ವರಿ ಟ್ರಸ್ಟ್ ಕಾರ್ಯದರ್ಶಿ ಸಿದ್ರಾಮಪ್ಪ ಸಣ್ಣೂರ, ಡಿವೈಎಸ್‌ಪಿ ಈ.ಎಸ್. ವೀರಭದ್ರಯ್ಯ ತಿಳಿಸಿದ್ದಾರೆ.
ಈ ಕುರಿತು ಸರ್ಕ್ಯೂಟ್ ಹೌಸ್‌ನಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಅವರು, ಗುರು ಪೂರ್ಣಿಮೆಯಂದು ಮಾತಾ ಮಾಣಿಕೇಶ್ವರಿ ಅಮ್ಮನವರ ಜನ್ಮದಿನದ ಪ್ರಯುಕ್ತ ಪ್ರತಿ ವರ್ಷ ಲಕ್ಷಾಂತರ ಜನರು ಯಾನಾಗುಂದಿಯ ಮಾಣಿಕ್ಯಗಿರಿ ಬೆಟ್ಟಕ್ಕೆ ಬಂದು ಅಮ್ಮನವರ ದರ್ಶನ ಪಡೆಯುತ್ತಿದ್ದರು. ಕೊರೊನಾ ಆತಂಕದ ಪ್ರಯುಕ್ತ ಮನೆಯಲ್ಲೇ ಈ ವರ್ಷ ಗುರುಪೂರ್ಣಿಮೆ ಆಚರಿಸಿ ಎಂದು ಮನವಿ ಮಾಡಿದರು.
ಅಮ್ಮನವರ ಅಗಲಿಕೆಯ ನಂತರ ಮೊದಲ ಗುರುಪೂರ್ಣಿಮೆ ಇದಾಗಿದ್ದು, ತಮ್ಮ ಅಗಾಧ ಶಕ್ತಿಯ ಮೂಲಕ ಇಡೀ ವಿಶ್ವದಲ್ಲಿ ಮಾತಾ ಮಾಣಿಕೇಶ್ವರಿ ಅಮ್ಮನವರು ನೆಲೆಸಿದ್ದಾರೆ. ಅವರ ತತ್ವಾದರ್ಶಗಳು ಇಂದಿಗೂ ಸಹ ಜೀವಂತವಾಗಿವೆ. ನಡೆದಾಡುವ ದೇವರಾಗಿದ್ದ ಮಾತಾ ಮಾಣಿಕೇಶ್ವರಿ ಈಗ ಸರ್ವಾಂತರ್ಯಾಮಿಯಾಗಿದ್ದಾರೆ. ಅಮ್ಮನವರನ್ನು ಮನದಲ್ಲೇ ಭಕ್ತಿಪೂರ್ವಕವಾಗಿ ಸ್ಮರಿಸಿ ಎಂದು ಮಾತಾ ಮಾಣಿಕೇಶ್ವರಿ ಟ್ರಸ್ಟ್ ಕಾರ್ಯದರ್ಶಿ ಸಿದ್ರಾಮಪ್ಪ ಸಣ್ಣೂರ ತಿಳಿಸಿದರು.
ಇನ್ನು ಇದೇ ವೇಳೆ ನಿಯಮ ಮೀರಿ ಯಾರಾದರೂ ಯಾನಾಗುಂದಿಗೆ ಬಂದರೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಚಿಂಚೋಳಿ ಉಪ ವಿಭಾಗದ ಡಿ ವೈ ಎಸ್ ಪಿ ವೀರಭದ್ರಯ್ಯ ಎಚ್ಚರಿಸಿದ್ದಾರೆ.