ಕಲಬುರಗಿ: ಈ ಊರು ಐತಿಹಾಸಿಕ ಸ್ಥಳವಾಗಿದ್ದರೂ ರಸ್ತೆ ಸಮಸ್ಯೆಯಿಂದ ಊರಿನ ಜನ ಬೇಸತ್ತು ಹೋಗಿದ್ದಾರೆ. ಮಾತ್ರವಲ್ಲ, ವಾರಕ್ಕೊಮ್ಮೆ ಶನೇಶ್ವರನ ದರ್ಶನ ಪಡೆಯಲೆಂದು ಬರುವ ಸಾವಿರಾರು ಭಕ್ತರು ಸಹ ಇದೇ ಸಮಸ್ಯೆಯನ್ನು ಎದುರಿಸುವಂತಾಗಿದೆ.
ಕಲಬುರಗಿ ತಾಲೂಕಿನ ಕೆರೆ ಬೋಸಗಾ ಗ್ರಾಮದ ಐತಿಹಾಸಿಕ ಶನೇಶ್ವರನ ದೇವಸ್ಥಾನದ ಮುಂಭಾಗದ ದುರ್ಗಮ ರಸ್ತೆಯ ದೃಶ್ಯ ಹೇಳದಂತಿದೆ. ದೇವಸ್ಥಾನ ಮುಂಭಾಗದ ರಸ್ತೆ ಅದು ರಸ್ತೆಯೋ ಚರಂಡಿಯೋ ಅಂತಾ ಒಂದು ಕ್ಷಣ ಆಲೋಚಿಸುವ ಹಾಗಾಗಿದೆ. ರಸ್ತೆ ಮೇಲೆಯೇ ಚರಂಡಿ ನೀರು ಹರಿಯುವುದರಿಂದ ಶನೇಶ್ವರನ ಭಕ್ತರಿಗೆ ಸಾಕಷ್ಟು ಸಮಸ್ಯೆ ಉಂಟಾಗುತ್ತಿದೆ.
ಸ್ವಚ್ಛವಾಗಿ ಸ್ನಾನ ಮಾಡಿಕೊಂಡು ಭಕ್ತಿಯಿಂದ ಶನೇಶ್ವರನ ದರ್ಶನಕ್ಕೆ ಬರುವ ಭಕ್ತರಿಗೆ ಮೊದಲು ದರ್ಶನ ಆಗೋದೆ ಚರಂಡಿ ನೀರು ಮತ್ತು ಹಂದಿಗಳು. ದೇವಸ್ಥಾನಕ್ಕೆ ಬರುವ ಭಕ್ತರು ಚರಂಡಿ ನೀರಿನಲ್ಲಿ ನಡೆದುಕೊಂಡು ಬಂದು ಶನೇಶ್ವರನ ದರ್ಶನ ಪಡೆಯುವ ದುಸ್ಥಿತಿ ನಿರ್ಮಾಣವಾಗಿದೆ.
ಐತಿಹಾಸಿಕ ಶನೇಶ್ವರ ದೇವಸ್ಥಾನ ಆವರಣದಲ್ಲಿ ಆಂಜನೇಯ, ಗಣಪತಿ, ದತ್ತಾತ್ರೇಯ, ಲಕ್ಷ್ಮಿ ನರಸಿಂಹ, ಶಿವ ಪಾರ್ವತಿ, 12 ಜೋತಿರ್ಲಿಂಗ ಸೇರಿದಂತೆ ಹಲವಾರು ದೇವಸ್ಥಾನಗಳಿವೆ. ಹೀಗಾಗಿ ಕಲಬುರಗಿ ಮಹಾನಗರ ಸೇರಿದಂತೆ ಜಿಲ್ಲೆಯ ಬೇರೆ ಬೇರೆ ಭಾಗದಿಂದ ಭಕ್ತರು ಆಗಮಿಸುತ್ತಾರೆ. ಅದರಲ್ಲೂ ಶನಿವಾರದಂದು ಶನೇಶ್ವರನ ದರ್ಶನಕ್ಕಾಗಿ ಸಾವಿರಾರು ಸಂಖ್ಯೆಯಲ್ಲಿ ಜನ ಆಗಮಿಸ್ತಾರೆ. ಹೀಗೆ ಬರುವ ಭಕ್ತರು ಈ ದುರಾವಸ್ಥೆಗೆ ಬೇಸತ್ತು ಹೋಗಿದ್ದಾರೆ.
ಕಳೆದ 15 ವರ್ಷಗಳಿಂದ ರಸ್ತೆ ಮೇಲೆ ಚರಂಡಿ ನೀರು ಹರಿಯುತ್ತಿದ್ದರೂ ಸಹ ಸಮಸ್ಯೆಗೆ ಮುಕ್ತಿ ಕೊಡಲು ಗ್ರಾಮ ಪಂಚಾಯತ್ ಮುಂದಾಗಿಲ್ಲ. ಈ ಸಮಸ್ಯೆ ಬಗ್ಗೆ ಗ್ರಾಮಸ್ಥರು, ಖುದ್ದು ಗ್ರಾಮ ಪಂಚಾಯತ್ ಸದಸ್ಯರಿಗೆ, ಪಂಚಾಯತ್ ಪಿಡಿಓ, ಅಧ್ಯಕ್ಷರ ಗಮನಕ್ಕೆ ತಂದರೂ ಏನೂ ಪ್ರಯೋಜನವಾಗಿಲ್ಲವಂತೆ.
ಮೂಲಭೂತ ಸೌಕರ್ಯಕ್ಕಾಗಿ ಲಕ್ಷ ಲಕ್ಷ ಹಣ ಖರ್ಚು ಮಾಡಲಾಗುತ್ತದೆ ಅಂತಾ ಹೇಳುತ್ತಿದರೂ ಸಹ ಯಾವುದೇ ಸೌಲಭ್ಯ ಕಲ್ಪಿಸಲಾಗ್ತಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ಹೊರಹಾಕಿದ್ದಾರೆ. ಗ್ರಾಮ ಪಂಚಾಯ್ತಿ ನಿರ್ಲಕ್ಷ್ಯ, ಬೇಜವಬ್ದಾರಿತನಕ್ಕೆ ಭಕ್ತಿಯಿಂದ ಶನಿ ದೇವರ ದರ್ಶನಕ್ಕೆ ಬರುವ ಭಕ್ತ ವೃಂದ, ಗ್ರಾಮಸ್ಥರು ಪರದಾಡುವಂತಾಗಿದೆ. ಇನ್ನಾದರೂ ಭೀಮಳ್ಳಿ ಗ್ರಾಮ ಪಂಚಾಯತ್ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.