ಕಲಬುರಗಿ: ಕಾಂಗ್ರೆಸ್ ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ಕಲಬುರಗಿಯ ಅಫಜಲಪುರ ವಿಧಾನಸಭೆ ಕ್ಷೇತ್ರದಲ್ಲೂ ಬಂಡಾಯ ಭುಗಿಲೆದ್ದಿದೆ. ಚುನಾವಣೆಗೆ ನಿಲ್ಲಲ್ಲ ಎಂದಿದ್ದ ಶಾಸಕ ಎಂ.ವೈ.ಪಾಟೀಲ್‌ಗೆ ಕಾಂಗ್ರೆಸ್ ಮಣೆ ಹಾಕಿರುವುದಕ್ಕೆ ಟಿಕೆಟ್ ವಂಚಿತರು ಹೈಕಮಾಂಡ್ ವಿರುದ್ದ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಈ ನಿಟ್ಟಿನಲ್ಲಿ ಸಭೆ ನಡೆಸಿದ್ದು, ಪಕ್ಷಕ್ಕೆ ಶಾಕ್ ಕೊಡಲು ನಿರ್ಧರಿಸಿದ್ದಾರೆ.
ಹೈವೋಲ್ಟೆಜ್ ಕ್ಷೇತ್ರವೆಂದು ಹೇಳಲಾಗಿರುವ ಅಫಜಲಪುರಕ್ಕೆ ಕಾಂಗ್ರೆಸ್ ಟಿಕೆಟ್ ಘೋಷಣೆಯಾಗ್ತಿದ್ದಂತೆ ಭಿನ್ನಮತ ಸ್ಫೋಟವಾಗಿದೆ. ವಯಸ್ಸಾಗಿರುವ ಕಾರಣ ಚುನಾವಣೆ ನಿಲ್ಲಲ್ಲ ಅಂತಾ ಅರ್ಜಿ ಕೂಡಾ ಹಾಕದ ಎಂ.ವೈ.ಪಾಟೀಲರಿಗೆ ಕಾಂಗ್ರೆಸ್ ಟಿಕೆಟ್ ಘೋಷಿದೆ. ಟಿಕೆಟ್ ಘೋಷಣೆ ಬೆನ್ನಲ್ಲೆ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ನಿಗಿನಿಗಿ ಕೆಂಡ ಕಾರುತ್ತಿರುವ ಟಿಕೆಟ್ ವಂಚಿತರು ಸೈಲೆಂಟ್ ಆಗಿ ಸಭೆ ನಡೆಸಿದರು. ಕ್ಷೇತ್ರದ ಕರ್ಜಗಿ ಗ್ರಾಮದ ಜಮೀನೊಂದರಲ್ಲಿ ಮಕ್ಬೂಲ್ ಪಟೇಲ್, ಬಾಷಾ ಪಟೇಲ್, ರಾಜೇಂದ್ರ ಪಾಟೀಲ್ ನೇತೃತ್ವದಲ್ಲಿ ಸಭೆ ನಡೆಯಿತು.
ಕಾಂಗ್ರೆಸ್ ಮುಖಂಡರು, ಗ್ರಾಮ ಪಂಚಾಯತಿ ಸದಸ್ಯರು, ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು ಮತ್ತು ಕೈ ಕಾರ್ಯಕರ್ತರು ಸೇರಿ 500ಕ್ಕೂ ಹೆಚ್ಚು ಜನ ಸೇರಿ ಸಭೆ ನಡೆಸಿ ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ. ಅರ್ಜಿ ಹಾಕಿರೋರನ್ನು ಬಿಟ್ಟು, ಅರ್ಜಿ ಹಾಕದ ಎಂ.ವೈ.ಪಾಟೀಲ್‌ಗೆ ಟಿಕೆಟ್ ಘೋಷಣೆ ಮಾಡಿದಕ್ಕೆ ಹೈಕಮಾಂಡ್ ವಿರುದ್ದ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಎರಡ್ಮೂರು ಗಂಟೆಗಳ ಕಾಲ ಸಭೆ ನಡೆಸಿರುವ ಟಿಕೆಟ್ ವಂಚಿತರು ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್‌ಗೆ ಬೆಂಬಲ ನೀಡದಂತೆ ನಿರ್ಧಾರ ಮಾಡಿದ್ದಾರೆ.
ಎಂ.ವೈ.ಪಾಟೀಲ್ ಮತ್ತೆ ಶಾಸಕರಾದ್ರೆ ಅವರ ಪುತ್ರ ಅರುಣಕುಮಾರ್ ಪಾಟೀಲ್ ಅವರ ದರ್ಬಾರ್ ಮುಂದುವರೆಯಲಿದೆ ಎಂದು ಚರ್ಚಿಸಿರುವ ಅತೃಪ್ತರು, ಯಾವುದೇ ಕಾರಣಕ್ಕೂ ಕಾಂಗ್ರೆಸ್ ಅಭ್ಯರ್ಥಿ ಪಾಟೀಲ್‌ಗೆ ಸಾಥ್ ನೀಡದಿರಲು ನಿರ್ಧರಿಸಿದ್ದಾರೆ. ಅಲ್ಲದೇ ಟಿಕೆಟ್ ವಂಚಿತರಲ್ಲಿ ಒಬ್ಬರನ್ನು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಒಮ್ಮತದ ನಿರ್ಧಾರ ಕೈಗೊಂಡಿದ್ದಾರೆ. ಈ ಮೂಲಕ ಕಾಂಗ್ರೆಸ್‌ಗೆ ಸೆಡ್ಡು ಹೊಡೆಯಲು ಬಂಡಾಯದ ಕಹಳೆ ಮೊಳಗಿಸಿದ್ದಾರೆ. ಇನ್ನೆರಡು ದಿನಗಳಲ್ಲಿ ಕೈ ಟಿಕೆಟ್ ಅತೃಪ್ತರು ಮತ್ತೊಂದು ಸಭೆ ನಡೆಸಿ ಬಂಡಾಯ ಅಭ್ಯರ್ಥಿಯನ್ನು ಕಣಕ್ಕಿಳಿಸುವ ತೀರ್ಮಾನ ಕೈಗೊಳ್ಳಲು ಯೋಜನೆ ರೂಪಿಸಿದ್ದಾರೆ.
ಇದನ್ನೂಓದಿ: ಮಹೇಶ ಕುಮಠಳ್ಳಿಗೆ ನೂರಕ್ಕೆ ನೂರರಷ್ಟು ಟಿಕೆಟ್ ಸಿಗುವ ಬಗ್ಗೆ ವಿಶ್ವಾಸವಿದೆ: ರಮೇಶ ಜಾರಕಿಹೊಳಿ