ಕಲಬುರಗಿ: ಹಿಂದೂ ಮುಸ್ಲಿಂ ಬಾಯ್ ಬಾಯ್.. ರಾಮನವಮಿಯಲ್ಲಿ ಹಿಂದೂಗಳಿಗೆ ಮುಸ್ಲಿಂ ಸಹೋದರರು ಜ್ಯೂಸ್ ವಿತರಣೆ ಮಾಡುವ ಮೂಲಕ ಸಹೋದರತ್ವ ಮೆರೆದಿದ್ದಾರೆ.
ಹಿಂದೂಗಳೊಂದಿಗೆ ಮುಸ್ಲಿಂರು ಸಾಮರಸ್ಯ ಜೀವನ ನಡೆಸುವುದು ಕಲ್ಯಾಣ ಕರ್ನಾಟಕ ಬಾಗದಲ್ಲಿ ಕಂಡುಬರುತ್ತದೆ. ಈ ಅನ್ಯೋನ್ಯತೆಗೆ ಸಾಕ್ಷಿ ಎಂಬಂತೆ ಹಿಂದೂ ಮುಸ್ಲಿಂ ಸಹೋದರತ್ವ ಸಾರಿದ ಆಚರಣೆ ಕಲಬುರಗಿ ನಗರದಲ್ಲಿ ಗಮನ ಸೆಳೆದಿದೆ. ಮುಸ್ಲಿಂ ಆದ್ರೂ ಗುರುವಾರ ಆಚರಿಸಿದ ಪವಿತ್ರ ರಾಮನವಮಿಯಲ್ಲಿ ಪಾಲ್ಗೊಂಡು ಹಿಂದುಗಳೊಂದಿಗೆ ಬೆರೆತು ಸಹೋದರತ್ವ ಸಾರಿದರು.
ಹಿಂದೂ ಧರ್ಮದ ಆರಾಧ್ಯ ದೈವ ಶ್ರೀರಾಮ ಜಯಂತಿ ಪ್ರಯುಕ್ತ ರಾಮನವಮಿಯನ್ನೂ ನಗರದಲ್ಲಿ ಸಂಭ್ರಮದಿಂದ ಆಚರಣೆ ಮಾಡಲಾಯಿತು. ರಾಮ ಮಂದಿರಗಳಲ್ಲಿ ಬೆಳಗ್ಗೆಯಿಂದ ವಿಶೇಷ ಪೂಜೆ ಕೈಯಂ ಕಾರ್ಯಗಳು ಜರುಗಿದವು. ಹಲವಡೆ ರಾಮನ ಭಕ್ತರು ಅನ್ನದಾಸೋಹ ವ್ಯವಸ್ಥೆ ಏರ್ಪಡಿಸಿದ್ದರು.
ಪ್ರತಿ ವರ್ಷದಂತೆ ನಗರದ ಆಳಂದ ಚೆಕ್ ಪೋಸ್ಟ್ ದಿಂದ ಶರಣಬಸವೇಶ್ವರ ದೇವಸ್ಥಾನವರೆಗೆ ಬೃಹತ್ ಶೋಭಾಯಾತ್ರೆ ಹಮ್ಮಿಕೊಳ್ಳಲಾಯಿತು. ಬಿರು ಬಿಸಿಲಿನಲ್ಲಿಯೂ ಅಪಾರ ಸಂಖ್ಯೆಯಲ್ಲಿ ಹಿಂದೂ ಯುವಕರು ಪಾಲ್ಗೊಂಡು ಸಂಭ್ರಮಿಸಿದರು. ಆದ್ರೆ ಶೋಭಾ ಯಾತ್ರೆಯಲ್ಲಿ ಮುಸ್ಲಿಂರು ಪಾಲ್ಗೊಂಡಿರುವದು ಖುಷಿಯ ವಿಚಾರವಾಗಿದೆ.
ಆಳಂದ ರಸ್ತೆಯ ಖಾದ್ರಿ ಚೌಕ್ ಬಳಿಯಲ್ಲಿ ಶಹಾಬಜಾರ ಶೇಖರೋಜಾ ಬಡಾಣೆಯ ಮುಸ್ಲಿಂರು ಹಿಂದೂ ಶೋಭಾಯಾತ್ರೆಯಲ್ಲಿ ಬಿಸಿಲಿನ ತಾಪದಿಂದ ಬಸವಳಿದ ಹಿಂದುಗಳಿಗೆ ತಂಪಾದ ಜ್ಯೂಸ್ ಕುಡಿಸಿ ಬಾಯಾರಿಕೆ ನಿವಾರಿಸಿದ್ದಾರೆ.
ಕೇಸರಿ ಬಳಿ ಹಸಿರು ಭಾರತ ತ್ರಿವರ್ಣ ಧ್ವಜದ ಬಣ್ಣದಲ್ಲಿ ಜ್ಯೂಸ್ ಸಿದ್ಧಪಡಿಸಿ ಸಾವಿರಾರು ಲೀಟರ್ ಜ್ಯೂಸ್ಅನ್ನು ಹಿಂದುಗಳಿಗೆ ವಿತರಣೆ ಮಾಡಿದರು. ಇದಲ್ಲದೇ ಮುಸ್ಲಿಂ ಮುಖಂಡರು ರಾಮನ ಮೂರ್ತಿಗೆ ಪೂಜಿಸಿ ಹಾಗೂ ಮೆರವಣಿಗೆಯಲ್ಲಿ ಪಾಲ್ಗೊಂಡ ಹಿಂದೂ ಮುಖಂಡರಿಗೆ ಸನ್ಮಾನಿಸಿದರು. ಹಿಂದೂ ಮುಖಂಡರು ಕೂಡ ಮುಸ್ಲಿಂ ಮುಖಂಡರಿಗೆ ಅಭಿನಂದಿಸಿ ಪರಸ್ಪರ ಸಹೋದರತ್ವ ಮೆರೆದರು.
ಸೂಫಿ ಸಂತರು ನಡೆದಾಡಿ ಹೋದಂತ ಶರಣರ ನಾಡು, ಶರಣಬಸವೇಶ್ವರ ಹಾಗೂ ಖಾಜಾ ಬಂದೆನವಾಜರ ಬೀಡು ಆಗಿರುವ ಕಲಬುರಗಿ ನಗರದಲ್ಲಿ ಕಳೆದ ಸುಮಾರು ವರ್ಷಗಳಿಂದ ಹಿಂದೂ ಮುಸ್ಲಿಂ ಬಾಯ್ ಬಾಯ್ ಆಗಿ ಸಾಮರಸ್ಯ ಬದುಕು ಸಾಗಿಸುತ್ತಿರುವುದು ಸಮಾಜಕ್ಕೆ ಮಾದರಿಯಾಗಿದೆ.
ರಾಮನವಮಿಯಲ್ಲಿ ಹಿಂದೂಗಳಿಗೆ ಮುಸ್ಲಿಮರು ತಂಪು ಪಾನಿಯಾಗಳನ್ನು ಕುಡಿಸಿ ಮೆರವಣಿಗೆಯಲ್ಲಿ ಭಾಗಿಯಾಗುತ್ತ ಬರ್ತಿದ್ದಾರೆ. ಸ್ಥಳೀಯ ಕಾರ್ಪೋರೇಟರ್ ರಹೀಮ್ ಪಟೇಲ್ ಅವರ ನೇತೃತ್ವದಲ್ಲಿ ಶಹಾಬಜಾರ ಶೇಖರೋಜಾ ಬಡಾವಣೆಯ ಮುಸ್ಲಿಂಮರು ಇಂತಹದೊಂದು ಅದ್ಬುತ ಕಾರ್ಯ ಮಾಡಿಕೊಂಡು ಬಂದಿದ್ದಾರೆ.
ಹಿಂದೊಮ್ಮೆ ಶೋಭಾಯಾತ್ರೆ ಸಾಗುವಾಗ ಮುಸ್ಲಿಂ ಪ್ರಾರ್ಥನೆ ಆಜಾನ್ ಪ್ರಾರಂಭವಾಗಿತ್ತು. ಆಗ ಹಿಂದೂಗಳು ಡಿಜೆ ಹಾಡು ನಿಲ್ಲಿಸಿ ಗೌರವ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.