ಕಲಬುರಗಿ : ಬಹಿರ್ದೆಸೆಗೆ ಹೋಗುತ್ತಿದ್ದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರವೆಸಗಿದ ಆರೋಪಿಗೆ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಕಠಿಣ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಕಳೆದ ನಾಲ್ಕು ವರ್ಷದ ಹಿಂದೆ ಆಳಂದ ತಾಲೂಕಿನ ಮಾದನ ಹಿಪ್ಪರಗಾದ ಬಾಲಕಿಯನ್ನು ಅದೇ ಗ್ರಾಮದ ನಿವಾಸಿ ಖಾಜಪ್ಪ ಚೌಗಲೆಗೆ ಸ್ನೇಹಿತರೊಂದಿಗೆ ಅಪಹರಿಸಿ ಮಹಾರಾಷ್ಟ್ರದ ಕಡೆ ಕರೆದೊಯ್ದು ನಿರಂತರವಾಗಿ ಅತ್ಯಾಚಾರ ಎಸಗಿದ್ದನು. ಬಳಿಕ ಆಕೆಗೆ ಜೀವ ಬೆದರಿಕೆ ಸಹ ಹಾಕಿದ್ದ.
ಈ ಕುರಿತು ಮಾದನ ಹಿಪ್ಪರಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಕೈಗೆತ್ತಿಕೊಂಡ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ನ್ಯಾಯಧೀಶ ಗೋಪಾಲಪ್ಪ ಎಸ್.ಅವರು ವಾದ, ಪ್ರತಿವಾದ ಆಲಿಸಿದ ಬಳಿಕ ಆರೋಪಿಗೆ ಪೋಕ್ಸೊ ಕಾಯ್ದೆಯಡಿ ಕಠಿಣ ಜೀವಾವಧಿ ಶಿಕ್ಷೆ ಹಾಗೂ ₹1ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ. ಅಲ್ಲದೆ ಕೃತ್ಯಕ್ಕೆ ಸಹಕರಿಸಿದ ಬಾಳಪ್ಪ ಚೌಗಲೆ, ಪರಶುರಾಮ ರಾಜಪ್ಪ, ಲಕ್ಷ್ಮಣ ಬೋಗಪ್ಪ, ಶಾಂತಾಬಾಯಿ ಬೋಗಪ್ಪ ಎಂಬ ಐವರು ಆರೋಪಿಗಳಿಗೆ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ.
ಸಂತ್ರಸ್ತ ಬಾಲಕಿಗೆ ಜಿಲ್ಲಾ ಕಾನೂನು ನೆರವು ಸಮಿತಿಯಿಂದ ₹ 5 ಲಕ್ಷ ಪರಿಹಾರ ಹಾಗೂ ದಂಡದ ಹಣದಲ್ಲಿ 3 ಲಕ್ಷ ಸೇರಿ 8 ಲಕ್ಷ ಪರಿಹಾರ ನೀಡಬೇಕು ಎಂದು ಆದೇಶಸಿಲಾಗಿದೆ.