ಕಲಬುರಗಿ: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್.ಡಿ. ಪಾಟೀಲ್ ಅಳಿಯ ಸೇರಿ ಮತ್ತೆ ಮೂವರು ಆರೋಪಿಗಳನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತರಿಬ್ಬರು ಆರ್.ಡಿ. ಪಾಟೀಲ್ ಆಪ್ತರಾಗಿದ್ದಾರೆ. ಅಫಜಲಪುರ ತಾಲೂಕಿನ ಮನೂರ್ ಗ್ರಾಮದ ನಿವಾಸಿ ಅಸ್ಲಂ ಹಾಗೂ ಕರಜಗಿ ಗ್ರಾಮದ ನಿವಾಸಿ ಮುನಾಫ್ ಜಮಾದಾರ ಬಂಧಿತ ಆರೋಪಿಗಳು.
ಈ ಇಬ್ಬರು ಆರೋಪಿಗಳು ಆರ್.ಡಿ. ಪಾಟೀಲ್ಗೆ ಅಭ್ಯರ್ಥಿಗಳನ್ನು ಪೂರೈಸುವುದಲ್ಲದೆ, ಬ್ಲೂಟೂತ್ ಸರಬರಾಜು ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಬಂಧಿತ ಆರೋಪಿ ಅಸ್ಲಂ ಪಿಎಸ್ಐ ಅಕ್ರಮದ ವಿರುದ್ಧದ ಹೋರಾಟಗಾರ ಧಾರವಾಡದ ಆರ್.ಎಸ್. ಪಾಟೀಲ್ಗೆ ಜೀವ ಬೆದರಿಕೆ ಹಾಕಿದ್ದ ಎನ್ನಲಾಗ್ತಿದೆ. ಸದ್ಯ ಇಬ್ಬರನ್ನು ಬಂಧಿಸಿದ ಅಧಿಕಾರಿಗಳು ಆರೋಪಿಗಳನ್ನು ಸಿಐಡಿ ಕಚೇರಿಗೆ ಕರೆತಂದು ವಿಚಾರಣೆ ನಡೆಸಿದ್ದಾರೆ.
ಆರ್ಡಿಪಿ ಅಳಿಯ ಸಿಐಡಿ ಬಲೆಗೆ: ಪಿಎಸ್ಐ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂದಿಸಿದಂತೆ ಕಿಂಗ್ ಪಿನ್ ಆರ್.ಡಿ. ಪಾಟೀಲ್ ಅಳಿಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕಾಶ್ ಬಂಧಿತ ಆರೋಪಿಯಾಗಿದ್ದಾನೆ. ಪ್ರಕಾಶ್ ಅಭ್ಯರ್ಥಿಗೆ ಬ್ಲೂಟೂತ್ ಸರಬರಾಜು ಮಾಡುತ್ತಿದ್ದ ಎನ್ನಲಾಗ್ತಿದೆ. ಸದ್ಯ ಎಮ್ ಎಸ್ ಇರಾಣಿ ಪರೀಕ್ಷಾ ಕೇಂದ್ರದಲ್ಲಿ ನಡೆದ ಎಕ್ಸಾಂ ನಲ್ಲಿ ಅಕ್ರಮವಾಗಿ ಪರೀಕ್ಷೆ ಬರೆದಿದ್ದ, ಬಂಧಿತ ಅಭ್ಯರ್ಥಿ ಪ್ರಭುಗೆ ಬ್ಲೂಟೂತ್ ನೀಡಿದ್ದ. ಅಲ್ಲದೆ ಆರ್.ಡಿ. ಪಾಟೀಲ್ ಹೇಳಿದ ಅಭ್ಯರ್ಥಿಗಳಿಗೆ ಪ್ರಕಾಶ್ ಬ್ಲೂ ಟೂತ್ಗಳನ್ನು ಸರಬರಾಜು ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಕಾನ್ಸ್ಟೇಬಲ್ ಪರೀಕ್ಷೆ ಅಕ್ರಮದ ಕಿಂಗ್ ಪಿನ್ ಆರ್ಡಿಪಿ ಅಳಿಯ: ಮಾವ ಪಿಎಸ್ಐ ಅಕ್ರಮದ ಕಿಂಗ್ ಪಿನ್ ಆದ್ರೆ. ಅಳಿಯ, ಕಾನ್ಸ್ಟೇಬಲ್ ಪರೀಕ್ಷೆ ಅಕ್ರಮದ ಕಿಂಗ್. ಸದ್ಯ ಪಿಎಸ್ಐ ಅಕ್ರಮ ಪ್ರಕರಣಕ್ಕೆ ಸಂಬಂದಿಸಿದಂತೆ ಬಂಧಿಸಲಾದ ಆರೋಪಿ ಆರ್ ಡಿ ಪಾಟೀಲ್ ಅಳಿಯ ಈ ಹಿಂದೆ ನಡೆದ ಕಾನ್ಸ್ಟೇಬಲ್ ಪರೀಕ್ಷೆಯಲ್ಲಿ ಬ್ಲೂ ಟೂತ್ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. ಈತನ ವಿರುದ್ಧ ಬ್ಲೂ ಟೂತ್ ನೀಡಿದ ಆರೋಪದಡಿ ಕಲಬುರಗಿ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕಾಶ್ ಇದೀಗ ಪಿಎಸ್ಐ ಅಕ್ರಮದಲ್ಲೂ ಭಾಗಿಯಾಗಿದ್ದು, ಸಿಐಡಿ ಅಧಿಕಾರಿಗಳು ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಇದನ್ನೂ ಓದಿ: ಪಿಎಸ್ಐ ಅಕ್ರಮ ಪ್ರಕರಣ: ಕಿಂಗ್ ಪಿನ್ ಪಾಟೀಲ್ ಮತ್ತೆ ಮೂರು ದಿನ ಸಿಐಡಿ ಕಸ್ಟಡಿಗೆ
ಬಂಧಿತರು ಎಂಟು ದಿನ ಸಿಐಡಿ ಕಸ್ಟಡಿಗೆ: ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಇಬ್ಬರು ಆರೋಪಿಗಳಾದ ಅಸ್ಲಾಂ ಹಾಗೂ ಮುನಾಫ್ ಜಮಾದಾರ್ನನ್ನು ಎಂಟು ದಿನಗಳ ಕಾಲ ಜೂನ್ 8 ರ ವರೆಗೆ ಸಿಐಡಿ ಕಸ್ಟಡಿಗೆ ನೀಡಿ ಕಲಬುರಗಿಯ ಮೂರನೇ ಜೆಎಮ್ಎಫ್ಸಿ ನ್ಯಾಯಾಲಯದಿಂದ ಆದೇಶ ಹೊರಡಿಸಿದೆ.