ಕಲಬುರಗಿ: ಪಾದಚಾರಿ ವಿದ್ಯಾರ್ಥಿಗಳ ಮೇಲೆ ಸಾರಿಗೆ ಸಂಸ್ಥೆ ಬಸ್ ಹರಿದ ಪರಿಣಾಮ ಓರ್ವ ವಿದ್ಯಾರ್ಥಿ ಮೃತಪಟ್ಟು ಇನ್ನೋರ್ವ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ ಘಟನೆ ಕಾಳಗಿ ತಾಲೂಕಿನ ಕುಡ್ಡಳ್ಳಿ ಬಳಿ ನಡೆದಿದ್ದು, ರಸ್ತೆ ತಡೆ ನಡೆಸಿ ಸಾರಿಗೆ ಸಂಸ್ಥೆ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುಡ್ಡಳ್ಳಿ ಗ್ರಾಮದ ಕಾಲೇಜು ವಿದ್ಯಾರ್ಥಿ ಸಿದ್ದಲಿಂಗ (18) ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೋರ್ವ ವಿದ್ಯಾರ್ಥಿ ರೇವಣಸಿದ್ದಪ್ಪನ (18) ಬೆನ್ನು ಮೂಳೆ ಮುರಿದು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ವಿದ್ಯಾರ್ಥಿಗಳಿಬ್ಬರು ನಿನ್ನೆ ಸಾಯಂಕಾಲ ನಡೆದುಕೊಂಡು ಬರುವಾಗ ಕಾಳಗಿ ಡಿಪೋಗೆ ಸೇರಿದ ಸಾರಿಗೆ ಬಸ್ ಡಿಕ್ಕಿ ಹೊಡೆದು ಅವಗಢ ಸಂಭವಿಸಿದೆ. ಸೌಜನ್ಯಕ್ಕಾದರೂ ಯಾವೊಬ್ಬ ಸಾರಿಗೆ ಅಧಿಕಾರಿ ಗ್ರಾಮಕ್ಕೆ ಭೇಟಿ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು, ಇಂದು ಕುಡ್ಡಳ್ಳಿ ಬಳಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಬಸ್ ಚಾಲಕನ ನಿರ್ಲಕ್ಷ್ಯದಿಂದ ಘಟನೆ ನಡೆದಿದ್ದು, ಮೃತ ವಿದ್ಯಾರ್ಥಿ ಕುಟುಂಬಕ್ಕೆ ಹಾಗೂ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿರುವ ವಿದ್ಯಾರ್ಥಿ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸುವಂತೆ ಆಗ್ರಹಿಸಿ ಪಟ್ಟು ಹಿಡಿದು ಕುಳಿತಾಗ ಸ್ಥಳಕ್ಕಾಗಮಿಸಿದ ಸಾರಿಗೆ ಅಧಿಕಾರಿ ಪರಿಹಾರ ನೀಡುವ ಭರವಸೆ ನೀಡಿದರು.