ಕಲಬುರಗಿ : ನಮ್ಮ ರಾಜ್ಯದಿಂದ 25 ಜನ ಸಂಸದರು ಆಯ್ಕೆಯಾಗಿದ್ದಾರೆ. ಆದರೂ ಅನುದಾನ ಮತ್ತು ಪರಿಹಾರ ನೀಡುವಲ್ಲಿ ಕೇಂದ್ರದಿಂದ ಅನ್ಯಾಯ ನಡೆದಿದೆಯೆಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ರೈತರ ಆತ್ಮಹತ್ಯೆ ಮುಂದುವರೆದಿದೆ. ಇಷ್ಟು ಜನ ಸಂಸದರಿದ್ದೂ ಏನು ಪ್ರಯೋಜನ? ಕೇವಲ ವಿಮಾನದಲ್ಲಿ ಸಮೀಕ್ಷೆ ನಡೆಸಿದರೆ ಆಯಿತೆ? ಮನಮೋಹನ್ ಸಿಂಗ್ ಆಡಳಿತದಲ್ಲಿದ್ದಾಗ ತಕ್ಷಣ ತಾತ್ಕಾಲಿಕ ಪರಿಹಾರ ನೀಡಿದ್ದರು. ಆದರೀಗ ಪರಿಹಾರಕ್ಕೆ ಸರಿಯಾದ ಸ್ಪಂದನೆ ಇಲ್ಲ. ಇನ್ನೂ ಪರಿಹಾರ ನೀಡುವಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯವನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಕಿಡಿಕಾರಿದರು.
ಇನ್ನು, ಬೇರೆ ರಾಜ್ಯದ ಮೇಲಿರುವ ಕಾಳಜಿ ಕರ್ನಾಟಕದ ಮೇಲಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸ್ವತಃ ಹಣದ ಕೊರತೆ ಇಲ್ಲವೆಂದು ಹೇಳಿದ್ದರು. ಆದರೀಗ ಸರಿಯಾದ ಸ್ಪಂದನೆ ಸಿಗುತ್ತಿಲ್ಲ. ಆಪರೇಶನ್ ಕಮಲಕ್ಕೆ ದುಡ್ಡಿತ್ತು. ಆದರೆ, ಜನತೆಗಾಗಿ ಕೊಡಲು ದುಡ್ಡಿಲ್ಲ ಎಂದು ಕಿಡಿಕಾರಿದರು.
ಬಿಜೆಪಿ ನಾಯಕರ ವರ್ಗಾವಣೆ ದಂಧೆ: ಜಿಲ್ಲೆಯಲ್ಲಿ ಬಿಜೆಪಿಯವರು ವರ್ಗಾವಣೆ ದಂಧೆಗೆ ಕೈ ಹಾಕಿದ್ದಾರೆ. ಪೊಲೀಸ್ ಪೇದೆಯಿಂದ ಡಿಸಿವರೆಗೂ ರೇಟ್ ಕಾರ್ಡ್ ಫಿಕ್ಸ್ ಮಾಡಿದ್ದಾರೆ. ಕಲ್ಯಾಣ ಕರ್ನಾಟಕ ಎಂದು ಹೆಸರಿಟ್ಟರೇ ಸಾಕಾ? ಕಲಬುರಗಿ ಕಲ್ಯಾಣ ಮನಸ್ಸು ಯಾರಿಗೂ ಇಲ್ಲ. ಇಲ್ಲಿನ ಬಿಜೆಪಿ ನಾಯಕರು ಅಭಿವೃದ್ಧಿಗಿಂತ ವರ್ಗಾವಣೆ ಮನವಿ ಪತ್ರ ಕೊಟ್ಟಿದ್ದೇ ಹೆಚ್ಚು ಎಂದು ವರ್ಗಾವಣೆ ದಂಧೆ ಕುರಿತು ಬಿಜೆಪಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.