ಕಲಬುರಗಿ: ಸಿಎಎ, ಎನ್ಸಿಆರ್ ಮತ್ತು ಎನ್ಪಿಆರ್ ಕಾಯ್ದೆ ಜಾರಿ ಕುರಿತಾದ ಪ್ರಶ್ನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಬಳಿ ಯಾವುದೇ ಉತ್ತರಗಳಿಲ್ಲ ಎಂದು ಮಾಜಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಕುಟುಕಿದ್ದಾರೆ.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಸ್ವಾತಂತ್ರ್ಯ ನಂತರ ಸಾಕಷ್ಟು ವಿಷಯಗಳನ್ನು ನೋಡಿದ್ದೇವೆ. ಆದರೀಗ ಪ್ರತಿ ನಾಗರಿಕನಿಗೂ ಪೌರತ್ವ ಸಾಬೀತು ಪಡಿಸುವ ಸಮಸ್ಯೆ ಎದುರಾಗಿದೆ. ಎನ್ಪಿಆರ್,ಎನ್ಆರ್ಸಿಗೂ ಸಂಬಂಧ ಇಲ್ಲ ಎನ್ನುತ್ತಿದ್ದಾರೆ. ಎನ್ಪಿಆರ್ ಮಾಡೋದು ನನ್ನ ಪ್ರಕಾರ ಅವಶ್ಯಕತೆ ಇಲ್ಲ. ಪೌರತ್ವ ಸಾಬೀತು ಮಾಡಿ ಅಂದ್ರೆ ಏನು ಅರ್ಥವಿಲ್ಲ. ಸಿಎಎ,ಎನ್ಆರ್ಸಿ, ಎನ್ಪಿಆರ್ ಇದು ಮುಸ್ಲಿಮರ ಸಮಸ್ಯೆ ಅಷ್ಟೇ ಅಲ್ಲ, ಪ್ರತಿ ನಾಗರಿಕನಿಗೂ ಸಮಸ್ಯೆ. ಈ ಕಾನೂನುಗಳನ್ನು ಯಾವುದೇ ಕಾರಣಕ್ಕೂ ಯಾವುದೇ ಜಾತಿ ಜನಾಂಗಗಳು ಸ್ವಾಗತ ಮಾಡಬಾರದು ಎಂದರು.
ಸಂವಿಧಾನಕ್ಕೆ ವಿರೋಧವಾಗಿ ನಡೆದುಕೊಳ್ಳುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಕಾನೂನು ಹೋರಾಟ ಮಾಡುವುದು ಅಗತ್ಯ. ತಕ್ಷಣ ಸಿಎಎ ಹಿಂಪಡೆಯಬೇಕು. ಈಗಾಗಲೇ ನಾನು ಯಾವುದೇ ದಾಖಲೆ ಕೊಡಲ್ಲ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಸೆರೆವಾಸಕ್ಕೂ ತಯಾರಿದ್ದೇವೆ. ದೇಶದ ಪ್ರತಿ ನಾಗರಿಕನೂ ಈ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುವಂತೆ ಸಸಿಕಾಂತ್ ಸೆಂಥೀಲ್ ಕರೆ ನೀಡಿದರು.