ಕಲಬುರಗಿ : ಅವರು 14 ಮತ್ತು 19 ವರ್ಷ ವಯಸ್ಸಿನ ಅಪ್ರಾಪ್ತ ಮಕ್ಕಳು. ಇನ್ನೂ ಉಂಡು ಆಡಬೇಕಾದ ವಯಸ್ಸು. ಆದರೆ, ಪಾಲಕರ ಒತ್ತಾಯಕ್ಕೆ ಮಣಿದು, ಒಲ್ಲದ ಮನಸ್ಸಿನಿಂದಲೇ ಹಸೆಮಣೆ ಏರಲು ಸಿದ್ದರಾಗಿದ್ದರು. ಅದ್ಯಾವಾಗ ಮಕ್ಕಳ ಕಲ್ಯಾಣ ಅಧಿಕಾರಿಗಳಿಗೆ ಈ ವಿಷಯ ಗೊತ್ತಾಯಿತೋ, ತಡಮಾಡದೆ ಮದುವೆ ಮನೆಗೆ ದಾಳಿ ಮಾಡಿ ಕಾನೂನು ಬಾಹಿರವಾಗಿ ನಡೆಯುತ್ತಿದ್ದ ಮದುವೆಯನ್ನು ತಪ್ಪಿಸಿದ್ದಾರೆ.
ಅಫಜಲಪುರ ಪಟ್ಟಣದ ವಡೆಯರ್ ಲೇಔಟ್ನಲ್ಲಿ ಬಾಲ್ಯ ವಿವಾಹ ನಡೆಯುತ್ತಿದೆ ಎಂದು ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿತ್ತು. ಮಾಹಿತಿ ಆಧರಿಸಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೀನಾಕ್ಷಮ್ಮ ಪಾಟೀಲ್ ನೇತೃತ್ವದಲ್ಲಿ ಮಕ್ಕಳ ಸಹಾಯವಾಣಿ ಇಲಾಖೆ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಜಂಟಿಯಾಗಿ ಮದುವೆ ಮನೆಗೆ ತೆರಳಿ ಮದುವೆ ತಡೆದಿದ್ದಾರೆ. 14 ವರ್ಷದ ಬಾಲಕಿ ಜೊತೆ 19 ವರ್ಷದ ಬಾಲಕನ ಮದುವೆ ಮಾಡಲು ತಯಾರಿ ನಡೆದಿತ್ತು.
ಮದುವೆ ಮನೆಗೆ ತೆರಳಿದ ಅಧಿಕಾರಿಗಳು, ಪೋಷಕರಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸಿದರು. ನಿಯಮ ಉಲ್ಲಂಘಿಸಿ ಬಾಲ್ಯ ವಿವಾಹ ಮಾಡಿದರೆ ಆಗಬಹುದಾದ ಶಿಕ್ಷೆ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಪೋಷಕರ ಮನವೊಲಿಸಿ ಬಾಲ್ಯ ವಿವಾಹದಿಂದ ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ. ಕಾನೂನು ಪ್ರಕಾರ ವರನಿಗೆ 21, ವಧುವಿಗೆ 18 ವರ್ಷ ತುಂಬುವರೆಗೆ ಮದುವೆ ಮಾಡುವುದಿಲ್ಲ ಎಂದು ಎರಡು ಕಡೆಯ ಪೋಷಕರು ಮುಚ್ಚಳಿಕೆ ಪತ್ರ ಬರೆದುಕೊಟ್ಟರು. ಈ ಮೂಲಕ ಪ್ರಕರಣ ಸುಖಾಂತ್ಯಗೊಂಡಿದೆ.