ಕಲಬುರಗಿ: ಮಾರಕಾಸ್ತ್ರ ಹಿಡಿದು ಓಡಾಡುತ್ತಿದ್ದ ವ್ಯಕ್ತಿಯೊಬ್ಬನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ ಘಟನೆ ಭಾನುವಾರ ರಾತ್ರಿ ನಡೆದಿದೆ. ಜನ ನಿಬಿಡ ಪ್ರದೇಶದಲ್ಲಿ ಅಬ್ದುಲ್ ಜಾಫರ್ ಎಂಬಾತ ಎರಡು ಕೈಯಲ್ಲಿ ತಲ್ವಾರ್ ಹಿಡಿದು ಜನರನ್ನ ಹೆದರಿಸುತ್ತಿದ್ದ. ತಡೆಯಲು ಹೋದ ಪೊಲೀಸರ ಮೇಲೆ ತಲ್ವಾರ್ನಿಂದ ದಾಳಿ ಮಾಡಲು ಮುಂದಾದಾಗ ವ್ಯಕ್ತಿಯ ಕಾಲಿಗೆ ಗುಂಡು ಹೊಡೆದು ಮಕಾಡೆ ಮಲಗಿಸಿದ್ದಾರೆ. ಒಂದು ಕೈಯಲ್ಲಿ ತಲವಾರ್ ಮತ್ತೊಂದು ಕೈಯಲ್ಲಿ ಚಾಕು ಹಿಡಿದ ಆರೋಪಿ ಜನರನ್ನು ಹೆದರಿಸುತ್ತಿದ್ದ. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಶರಣಾಗು ಎಂದರೂ ಜಗ್ಗದೇ ಪೊಲೀಸರ ಮೇಲೆ ದಾಳಿಗೆ ಮುಂದಾಗಿದ್ದ. ಆತ್ಮರಕ್ಷಣೆಗಾಗಿ ಕಿರಾತಕನ ಕಾಲಿಗೆ ಪಿಎಸ್ಐ ಗುಂಡು ಹೊಡೆದು ವಶಕ್ಕೆ ಪಡೆದಿದ್ದಾರೆ.
ಆತ್ಮರಕ್ಷಣೆಗಾಗಿ ಫೈರಿಂಗ್: ಭಾನುವಾರ ರಾತ್ರಿ ಸುಮಾರು 9 ಗಂಟೆ ಹೊತ್ತಿಗೆ ಕಲಬುರಗಿ ನಗರದ ಸೂಪರ್ ಮಾರ್ಕೇಟ್ಗೆ ಏರಿಯಾದ ತರಕಾರಿ ಮಾರ್ಕೇಟ್ ಎದುರುಗಡೆ ಮುಖ್ಯ ರಸ್ತೆಯಲ್ಲಿ ಅಬ್ದುಲ್ ಜಾಫರ್ ಎಂಬಾತ ಒಂದು ಕೈಯಲ್ಲಿ ತಲ್ವಾರ್ ಮತ್ತೊಂದು ಕೈಯಲ್ಲಿ ಚಾಕು ಹಿಡಿದುಕೊಂಡು ನಿರ್ಭಿತಿಯಿಂದ ಓಡಾಡುತ್ತ ಜನರನ್ನ ಹೆದರಿಸುತ್ತಿದ್ದ. ವಿಷಯ ತಿಳಿದು ಚೌಕ ಠಾಣೆ ಪಿಎಸ್ಐ ವಾಹೀದ್ ಕೋತ್ವಾಲ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ.
ತಲ್ವಾರ್ ಹಿಡಿದು ವ್ಯಾಪಾರಿಗಳು ಹಾಗೂ ಜನರನ್ನ ಹೆದರಿಸುತ್ತಿದ್ದ ಜಾಫರ್ಗೆ ಪೊಲೀಸರು ಶರಣಾಗುವಂತೆ ತಿಳಿಸಿದ್ದಾರೆ. ಆದರೂ ಜಗ್ಗದ ಕಿರಾತಕ ಜಾಫರ್ ಪೊಲೀಸರ ಮೇಲೆಯೇ ತಲ್ವಾರ್ ಬೀಸಿ ದಾಳಿ ಮಾಡಲು ಯತ್ನಿಸಿದ್ದಾನೆ. ಆಗ ಹೆದರಿಸಲು ಪಿಎಸ್ಐ ವಾಹೀದ್ ಕೋತ್ವಾಲ್ ಗಾಳಿಯಲ್ಲಿ ಒಂದು ಗುಂಡು ಹಾರಿಸಿದ್ದಾರೆ. ಆಗಲೂ ಜಗ್ಗದಿದ್ದಾಗ ಎಡಗಾಲಿಗೆ ಎರಡು ಸುತ್ತು ಗುಂಡು ಹೊಡೆದು ವಶಕ್ಕೆ ಪಡೆದಿದ್ದಾರೆ.
ಆಸ್ಪತ್ರೆಗೆ ದಾಖಲು: ಪೊಲೀಸ್ ಗುಂಡೇಟು ತಿಂದು ಗಾಯಗೊಂಡಿದ್ದ ಜಾಫರ್ನನ್ನ ಪೊಲೀಸರು ಕಲಬುರಗಿ ನಗರದ ಜೀಮ್ಸ್ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಬಳಿಕ ಬಸವೇಶ್ವರ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸ್ ಕಮಿಷನರ್ ಚೇತನ್ ಆರ್, ಡಿಸಿಪಿ ಅಡ್ಡೂರು ಶ್ರೀನಿವಾಸುಲು, ಎಸಿಪಿ ದೀಪನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮುಂದುವರೆದ ತನಿಖೆ: ಸದ್ಯ ಪೊಲೀಸರು ಆರೋಪಿ ಹಿನ್ನೆಲೆ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಘಟನೆ ಕುರಿತಂತೆ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಘಟನೆ ಸಂಪೂರ್ಣ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
"ರಾತ್ರಿ 9 ಗಂಟೆ ಸುಮಾರಿಗೆ ಮಾರ್ಕೆಟ್ಗೆ ಬಂದ ವ್ಯಕ್ತಿ ಎರಡು ಕೈಯಲ್ಲಿ ಮಾರಕಾಸ್ತ್ರ ಹಿಡಿದುಕೊಂಡು ಸಾರ್ವಜನಿಕರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಈ ವಿಚಾರ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಶರಣಾಗುವಂತೆ ಹೇಳಿದರೂ ಶರಣಾಗಿಲ್ಲ. ಬದಲಾಗಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಈ ಸಂದರ್ಭದಲ್ಲಿ ಸಿಬ್ಬಂದಿ ಹಾಗೂ ಸಾರ್ವಜನಿಕರ ಆತ್ಮರಕ್ಷಣೆಗಾಗಿ ಪೊಲೀಸರು ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಕೂಡಲೇ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ" ಎಂದು ಪೊಲೀಸ್ ಕಮಿಷನರ್ ಚೇತನ್ ಹೇಳಿದ್ದಾರೆ.
ಆತ ಮಾನಸಿಕ ಅಸ್ವಸ್ಥ.. 'ಅಬ್ದುಲ್ ಜಾಫರ್ ಮಾನಸಿಕ ಅಸ್ವಸ್ಥ. ಅವನ ಮೇಲೆ ಗುಂಡು ಹಾರಿಸಬಾರದಿತ್ತು. ಬೇರೆ ರೀತಿಯಲ್ಲಿ ಹಿಡಿಯಬಹುದಿತ್ತು' ಎಂದು ಪೊಲೀಸರ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾಲ್ಕು ದಿನಗಳಿಂದ ಮತ್ತೆ ಮಾನಸಿಕ ಅಸ್ವಸ್ಥನಾದ ಹಿನ್ನೆಲೆ ಕಲಬುರಗಿಯ ಬಹಮನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಭಾನುವಾರ ರಾತ್ರಿ ಆಸ್ಪತ್ರೆಯಿಂದ ತಪ್ಪಿಸಿಕೊಂಡು ಬಂದಿದ್ದ. ಹೀಗೆ ಬಂದವನು ಇಷ್ಟೊಂದು ಅವಾಂತರ ಮಾಡಿದ್ದಾನೆ. ಕೈಯಲ್ಲಿ ಚಾಕು ಹಿಡಿದು ಗಲಾಟೆ ಮಾಡಿದ್ದಾನೆ. ಆದರೆ ಯಾರ ಮೇಲೂ ಹಲ್ಲೆ ಮಾಡಿಲ್ಲ. ಆದರೂ ಪೊಲೀಸರು ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ. ಕೋಲಿನಿಂದ ಹೊಡೆದು, ಬಲಿ ಹಾಕಿ ಅಥವಾ ಮತ್ಯಾವುದಾದರೂ ರೀತಿಯಲ್ಲಿ ಆತನನ್ನ ವಶಕ್ಕೆ ಪಡೆಯಬೇಕಾಗಿತ್ತು. ಪೊಲೀಸರ ಗುಂಡಿನಿಂದ ಜಾಫರ್ ಕಾಲಿನ ಮೂಳೆ ಮುರಿದಿದೆ. ಮುಂದೆ ಎದ್ದು ನಡೆಯುವುದೇ ಕಷ್ಟವಾಗಿದೆ. ಆತನ ಜೀವನ ಮಾತ್ರವಲ್ಲ, ಹೆಂಡತಿ ಮಕ್ಕಳ ಗತಿ ಏನು?' ಎಂದು ಸಂಬಂಧಿಗಳು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಸರಣಿ ದರೋಡೆ ಪ್ರಕರಣ.. ಇಬ್ಬರು ಆರೋಪಿಗಳಿಗೆ ಆನೇಕಲ್ ಪೊಲೀಸರಿಂದ ಗುಂಡೇಟು