ಕಲಬುರಗಿ: ಜಿಲ್ಲೆಯಲ್ಲಿ ಎಡೆಬಿಡದೇ ಸುರಿಯುತ್ತಿರುವ ಮಳೆ ಇಲ್ಲಿನ ಜನರ ಬದುಕನ್ನು ಹೈರಾಣಾಗಿಸಿದೆ. ಎಲ್ಲಾ ನದಿ, ಹಳ್ಳಗಳು ತುಂಬಿ ಹರಿಯುತ್ತಿವೆ. ಭಾರೀ ಮಳೆ ಹಿನ್ನೆಲೆಯಲ್ಲಿ ಎಲ್ಲಾ ಕಾಮಗಾರಿಗಳು ಸ್ಥಗಿತಗೊಂಡಿವೆ. ಕಾಳಗಿ ತಾಲೂಕಿನ ಚಿಂಚೋಳಿ (ಎಚ್) ಗ್ರಾಮದಲ್ಲಿ ನದಿಗೆ ನಿರ್ಮಿಸಲಾಗುತ್ತಿದ್ದ ಸೇತುವೆ ಕಾಮಗಾರಿ ಸಹ ಮಳೆಯಿಂದ ಸ್ಥಗಿತಗೊಂಡಿದ್ದು, ಜನರು ತುಂಬಿ ಹರಿಯುತ್ತಿರುವ ಹಳ್ಳದ ಮೂಲಕವೇ ಸ್ಮಶಾನದತ್ತ ಶವ ಹೊತ್ತೊಯ್ಯುವ ಅನಿವಾರ್ಯತೆ ಸಹ ಎದುರಾಗಿದೆ.
ಚಿಂಚೋಳಿ (ಎಚ್) ಗ್ರಾಮದಲ್ಲಿ ಸೇತುವೆ ಕಾಮಗಾರಿ ಇತ್ತೀಚೆಗಷ್ಟೇ ಆರಂಭವಾಗಿತ್ತು. ಆದರೆ ಮಳೆಗಾಲ ಎದುರಾದ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಈ ಗ್ರಾಮದ ಜನರು ಗ್ರಾಮದಿಂದ ಬೇರೆಡೆಗೆ ತೆರಳಬೇಕಾದರೆ ನದಿ ನೀರನ್ನು ದಾಟಿಕೊಂಡೇ ಹೋಗಬೇಕು.
ಮಳೆ ಕಾರಣ ಹಳ್ಳ ತುಂಬಿ ಹರಿಯುತ್ತಿದ್ರೂ ಜನ ಅದನ್ನು ಲೆಕ್ಕಿಸದೇ ಅಂತ್ಯಸಂಸ್ಕಾರ ಮಾಡಲು ಶವವನ್ನುಈ ಹಳ್ಳದ ಮೂಲಕವೇ ಹೊತ್ತೊಯ್ದಿದ್ದಾರೆ. ಮೃತ ವ್ಯಕ್ತಿ ಯಾರೆಂಬ ಬಗ್ಗೆ ಮಾಹಿತಿ ಇಲ್ಲ. ಆದರೆ ಕೊರೊನಾ ಆತಂಕದ ನಡುವೆಯೂ ಇಷ್ಟೊಂದು ಜನ ಜೀವದ ಹಂಗು ತೊರೆದು ಶವಸಂಸ್ಕಾರಕ್ಕೆಂದು ಈ ನದಿ ದಾಟಿ ಹೊರಟಿದ್ದಾರೆ. ಮಾತ್ರವಲ್ಲದೇ, ವೃದ್ಧರು ಸೇರಿದಂತೆ ನೂರಾರು ಮಂದಿ ಶವಯಾತ್ರೆಯಲ್ಲಿ ಪಾಲ್ಗೊಂಡಿದ್ದು, ಈ ಮಳೆಗಾಲದಲ್ಲಿ ಇಂತಹ ದುಸ್ಸಾಹಸಕ್ಕಿಳಿಯುವ ಅನಿವಾರ್ಯತೆ ಇತ್ತಾ ಎನ್ನುವ ಪ್ರಶ್ನೆ ಸಹ ಮೂಡಿದೆ.
ಈ ಗ್ರಾಮದಿಂದ ಬೇರೆಡೆಗೆ ಹೋಗಲು ಮತ್ತೊಂದು ಪರ್ಯಾಯ ರಸ್ತೆ ಇದೆ ಎನ್ನಲಾಗುತ್ತಿದೆಯಾದರೂ ಈ ರಸ್ತೆ ಇರುವ ಜಮೀನಿನ ರೈತರು ತಕರಾರು ತೆಗೆದು ಜನರ ಸಂಚಾರಕ್ಕೆ ಅನುವು ಮಾಡಿಕೊಟ್ಟಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಚಿಂಚೋಳಿ (ಎಚ್) ಗ್ರಾಮಸ್ಥರು ಹರಿಯುತ್ತಿರುವ ಹಳ್ಳದ ನೀರಿನಲ್ಲೇ ಸ್ಮಶಾನದತ್ತ ಹೆಜ್ಜೆ ಹಾಕಿದ್ದಾರೆ. ಆದರೆ ಈ ವೇಳೆ ಕೊಂಚ ಯಾಮಾರಿದ್ರೂ ಅನಾಹುತ ಸಂಭವಿಸುವುದನ್ನು ಅಲ್ಲಗಳೆಯುವಂತಿಲ್ಲ.