ಕಲಬುರಗಿ: ಕೊರೊನಾ ಶಂಕಿತ ವ್ಯಕ್ತಿ ಮೃತಪಟ್ಟಿರುವುದು ಮಾರಕ ಸೋಂಕಿನಿಂದ ಎನ್ನುವುದು ಸ್ಪಷ್ಟವಾಗಿಲ್ಲ. ಹಾಗಾಗಿ ಜನ ಹೆದರುವ ಅಗತ್ಯವಿಲ್ಲ ಎಂದು ಡಿಸಿ ಬಿ .ಶರತ್ ತಿಳಿಸಿದರು.
ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ. 29 ರಂದು ಸೌದಿ ಅರೇಬಿಯಾದಿಂದ ಬಂದಿದ್ದ ವೃದ್ಧರಿಗೆ ಕೊರೊನಾ ಲಕ್ಷಣಗಳು ಕಂಡುಬಂದಿದ್ದವು. ಈ ಹಿನ್ನೆಲೆ ಜಿಮ್ಸ್ ಆಸ್ಪತ್ರೆಯ ಕೊರೊನಾ ವಿಶೇಷ ವಾರ್ಡ್ನಲ್ಲಿ ದಾಖಲಿಸಲಾಗಿತ್ತು. ತೀವ್ರ ಅಸ್ವಸ್ಥಗೊಂಡ ಕಾರಣ ನಿನ್ನೆ ಹೈದರಾಬಾದ್ಗೆ ಚಿಕಿತ್ಸೆಗೆಂದು ಕರೆದೊಯ್ಯಲಾಗಿತ್ತು. ಆದರೆ, ಅಲ್ಲಿ ದಾಖಲಿಸಿಕೊಳ್ಳದ ಹಿನ್ನೆಲೆ ಕಲಬುರಗಿಗೆ ವಾಪಸ್ ತರಲಾಗಿತ್ತು. ಆದರೆ, ಇಂದು ನಸುಕಿನ ಜಾವ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ ಎಂದರು.
ಕೊರೊನಾ ಶಂಕೆ ಹಿನ್ನೆಲೆಯಲ್ಲಿ ಅವರ ಕುಟುಂಬದ ಸದಸ್ಯರನ್ನು ಸ್ಕ್ರೀನಿಂಗ್ ಮಾಡಲಾಗಿದೆ. ಅವರ ಕುಟುಂಬದಲ್ಲಿ 7 ರಿಂದ 8 ಜನರಿದ್ದಾರೆ. ಅವರ ಜೊತೆ ಸಂಪರ್ಕದಲ್ಲಿದ್ದ 30 ಜನರ ಬಗ್ಗೆಯೂ ನಿಗಾ ಇಡಲಾಗಿದೆ. ಶವವನ್ನು ಸ್ಯಾನಿಟೈಜ್ ಮಾಡಿ ಮುನ್ನೆಚ್ಚರಿಕೆ ಕ್ರಮದೊಂದಿಗೆ ಭೂಮಿಯಲ್ಲಿ ಹೂಳಿ ಸಂಸ್ಕಾರ ಮಾಡಲಾಗಿದೆ ಎಂದು ತಿಳಿಸಿದರು.
ಬಳಿಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಎಮ್.ಎ.ಜಬ್ಬಾರ ಮಾತನಾಡಿ, ಮೃತ ವೃದ್ಧನ ಅಂತ್ಯಕ್ರಿಯೆ ಇಸ್ಲಾಂ ಧರ್ಮದ ವಿಧಿವಿಧಾನದಂತೆ ಕುಟುಂಬಸ್ಥರು ನೇರೆವೆರಿಸಿದ್ದಾರೆ. ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮದ ಅನ್ವಯ ಆಳವಾದ ಗುಂಡಿಯಲ್ಲಿ ಶವ ಹೂಳುವ ಮೂಲಕ ಅಂತ್ಯಕ್ರಿಯೆ ನೇರವೇರಿಸಲಾಗಿದೆ. ಜಿಲ್ಲಾ ಆರೋಗ್ಯ ಇಲಾಖೆ ಉಸ್ತುವಾರಿಯಲ್ಲಿ ಶವದ ಹತ್ತಿರ ಜನ ಬರದಂತೆ ನೋಡಿಕೊಂಡು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಅಂತ್ಯಕ್ರಿಯೆ ನೇರವೇರಿಸಲಾಗಿದೆ ಎಂದರು.