ಕಲಬುರಗಿ : ಇತ್ತೀಚೆಗೆ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆ ಪೋಲಿಸರು ಅಲರ್ಟ್ ಆಗಿದ್ದು, ಇಂದು ನಗರದಲ್ಲಿ ರೌಡಿಶೀಟರ್ಗಳ ಪರೇಡ್ ನಡೆಸಲಾಯಿತು. ಡಿಸಿಪಿ ಅಡ್ಡೂರು ಶ್ರೀನಿವಾಸಲು ಅವರ ನೇತೃತ್ವದಲ್ಲಿ ನಗರದ ಎಸಿಪಿ ಎ ಡಿವಿಜನ್ ಕಚೇರಿಯ ಎದುರಿನಲ್ಲಿ ನಡೆದ ಪರೇಡ್ನಲ್ಲಿ ಸ್ಟೇಷನ್ ಬಜಾರ್, ಚೌಕ್ ಪೋಲಿಸ್ ಠಾಣೆ, ವಿಶ್ವವಿದ್ಯಾಲಯ ಠಾಣೆ ಸೇರಿ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಶೀಟರ್ಗಳು ಭಾಗವಹಿಸಿದ್ದರು.
ಈ ವೇಳೆ, ಡಿಸಿಪಿ ಅಡ್ಡೂರು ಶ್ರೀನಿವಾಸಲು ಅವರು ಅಕ್ರಮ ಚಟುವಟಿಕೆ, ಗಲಭೆಯಂತಹ ಪ್ರಕರಣಗಳಲ್ಲಿ ಸಿಕ್ಕಿಹಾಕಿಕೊಂಡರೆ ನಿರ್ದಾಕ್ಷಿಣ್ಯವಾಗಿ ಗಡಿಪಾರು ಮಾಡಲಾಗುವುದು. ನಿಮ್ಮ ಪ್ರತಿಯೊಂದು ಚಟುವಟಿಕೆಗಳ ಮೇಲೆ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದೆ ಎಂದು ರೌಡಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಹೆಚ್ಚಾಗಿರುವ ಭೂ ವ್ಯಾಜ್ಯ ಪ್ರಕರಣ : ಇತ್ತೀಚಿಗೆ ಜಿಲ್ಲೆಯಲ್ಲಿ ಭೂವ್ಯಾಜ್ಯ ಪ್ರಕರಣಗಳು ಹೆಚ್ಚಾಗಿದ್ದು, ಯಾರಾದರೂ ಸಾರ್ವಜನಿಕರಿಗೆ ಹೆದರಿಸಿ ಭೂಮಿ ಕಬಳಿಕೆ ಮಾಡುವುದಾಗಲಿ, ವಂಚಿಸಿ ಭೂಮಿ ಪಡೆದು ಮೋಸ ಮಾಡಿ ಬೆದರಿಸುವುದಾಗಲಿ ಮಾಡಿದರೆ ಪರಿಣಾಮ ನೆಟ್ಟಗಿರುವುದಿಲ್ಲ, ಬದಲಾದರೆ ಉತ್ತಮ. ಇಲ್ಲವಾದರೆ ಜೈಲಿನಲ್ಲಿ ಮುದ್ದೆ ಮುರಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಗಡಿಪಾರಿಗಾಗಿ ಶಿಫಾರಸು: ನಗರದ ವಿವಿಧ ಠಾಣೆಯ ಒಟ್ಟು 700 ರೌಡಿಶೀಟರ್ ಗಳ ಮೇಲೆ ನಿಗಾ ವಹಿಸಲಾಗಿದೆ. ಇನ್ನು ಕೆಲವರ ಗಡಿಪಾರಿಗಾಗಿ ಹಾಗೂ ಗೂಂಡಾ ಕಾಯ್ದೆ ಸೇರ್ಪಡೆಗೆ ಶಿಫಾರಸು ಮಾಡಲಾಗಿದ್ದು, ಸರ್ಕಾರದಿಂದ ಅನುಮತಿ ಬಂದ ಬಳಿಕ 10ಕ್ಕೂ ಹೆಚ್ಚು ರೌಡಿಶೀಟರ್ ಗಳನ್ನು ಗಡಿಪಾರು ಮಾಡಲಾಗುವುದು. ರೌಡಿಗಳು ಎಂತಹ ಹಿನ್ನೆಲೆ ಹೊಂದಿದ್ದರೂ ಸರಿ, ಯಾರನ್ನೂ ಸುಮ್ಮನೆ ಬಿಡುವುದಿಲ್ಲ. ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಪಿ ತಿಳಿಸಿದ್ದಾರೆ.
ಓದಿ : ಬಾಲಕನನ್ನು ನೀರಿಗೆ ಎಳೆದೊಯ್ದ ಮೊಸಳೆ : ಎಕ್ಸರೇಯಲ್ಲಿ ಹೊಟ್ಟೆ ಖಾಲಿ, ನದಿಯಲ್ಲೂ ಸಿಗದ ಮೃತದೇಹ!