ಕಲಬುರಗಿ: ಬಿ ಎಸ್ ಯಡಿಯೂರಪ್ಪ ಚೆಕ್ ಮೂಲಕ ಲಂಚ ಪಡೆಯುತ್ತಿದ್ದರು. ಇದೀಗ ಅವರ ಮಗ ಮಾಡರ್ನ್ ಆಗಿದ್ದು, ಆರ್‌ಟಿಜಿಎಸ್ ಮೂಲಕ ಲಂಚ ಪಡೆಯುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.
ಕಲಬುರಗಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಇಂತಹ ಭ್ರಷ್ಟ ಸರ್ಕಾರವನ್ನು ನಾನು ನನ್ನ ರಾಜಕೀಯ ಜೀವನದಲ್ಲಿ ಎಂದೂ ನೋಡಿಲ್ಲ. ರಾಜ್ಯ ಸರ್ಕಾರದಲ್ಲಿ ಇದ್ದವರು ಹಗಲು ದರೋಡೆ ಮಾಡುತ್ತಿದ್ದಾರೆ. ನೆರೆ ಸಂತ್ರಸ್ತರಿಗೆ ಇನ್ನೂ ನಯಾಪೈಸೆ ಹಣ ಬಂದಿಲ್ಲ. ಪ್ರವಾಹದಲ್ಲಿ ಜೀವನ ಕಳೆದುಕೊಂಡವರು ಆಕಾಶ ನೋಡುತ್ತಾ ಕೂರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಜನರು ಅಭಿಮಾನದಿಂದ ಸಿಎಂ ಆಗಲಿ ಅಂತ ಜೈಕಾರ ಹಾಕ್ತಾರೆ. ಆದ್ರೆ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಅನ್ನೋದು ಹೈಕಮಾಂಡ್ ಮತ್ತು ಶಾಸಕರು ನಿರ್ಧರಿಸುತ್ತಾರೆ. ಉಪಚುನಾವಣೆ ಎರಡು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುವ ಭರವಸೆ ಇದೆ. ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದ್ದು, ಜನ ಬಿಜೆಪಿ ಆಡಳಿತ ವಿರುದ್ಧ ರೋಸಿ ಹೋಗಿದ್ದಾರೆ. ಹೀಗಾಗಿ ಎರಡು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ರಾಜ್ಯ ಸರ್ಕಾರ ಪ್ರವಾಹ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಿಲ್ಲ. ಸಿಎಂ ವೈಮಾನಿಕ ಸಮೀಕ್ಷೆಯಿಂದ ಯಾವುದೇ ಪ್ರಯೋಜನ ಇಲ್ಲ. ಸ್ಥಳಕ್ಕೆ ಭೇಟಿ ನೀಡಿ ವಾಸ್ತವತೆ ಅರಿಯಬೇಕಾಗಿತ್ತು ಎಂದು ಸಿದ್ದರಾಮಯ್ಯ ಹೇಳಿದರು.
ಅಭಿವೃದ್ಧಿ ಬಗ್ಗೆ, ಸಂತ್ರಸ್ತರ ಬಗ್ಗೆ ಮಾತನಾಡುವುದನ್ನು ಬಿಟ್ಟು, ಕಾಂಗ್ರೆಸ್ನಿಂದ ಬಿಜೆಪಿಗೆ ಅಷ್ಟು ಶಾಸಕರು ಬರುತ್ತಾರೆ, ಇಷ್ಟು ಶಾಸಕರ ಬರುತ್ತಾರೆ ಎಂದು ಹೇಳ್ಕೊಂಡು ತಿರುಗಾಡುತ್ತಿದ್ದಾರೆ. 15 ಜನ ಬಿಜೆಪಿ ಶಾಸಕರು ಕಾಂಗ್ರೆಸ್ಗೆ ಬರುತ್ತಾರೆ ಎಂದು ನಾನು ಸಹ ಹೇಳಬಹುದು. ಆದರೆ ನಾನು ಹಾಗೆ ಹೇಳುವವನಲ್ಲ ಎಂದು ಡಿಸಿಎಂ ಲಕ್ಷ್ಮಣ್ ಸವದಿಗೆ ಟಾಂಗ್ ನೀಡಿದರು.
ಸಿದ್ದರಾಮಯ್ಯಗಿಂತ ಹೆಚ್ಚಿನ ದಮ್ ನಮ್ಮ ಹತ್ತಿರ ಇದೆ ಎಂದು ಹೇಳಿದ ಡಿಸಿಎಂ ಅಶ್ವತ್ಥ್ ನಾರಾಯಣ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ದಮ್ ಅಂದ್ರೆ ಕುಸ್ತಿ ಆಡುವುದಲ್ಲ, ದಮ್ ಅಂದ್ರೆ ಪ್ರಧಾನಿ ಮೋದಿ ಮುಂದೆ ಕುಳಿತು ಪರಿಹಾರ ತೆಗೆದುಕೊಂಡು ಬರಲಿ. ರಾಜ್ಯದಲ್ಲಿ 25 ಜನ ಬಿಜೆಪಿ ಸಂಸದರು ಇದ್ದೂ ಪ್ರಯೋಜನವಿಲ್ಲ. ಪ್ರಧಾನಿ ಮೋದಿ ಬಳಿ ಹೋಗಿ ರಾಜ್ಯಕ್ಕೆ ಬರಬೇಕಾದ ಪರಿಹಾರ ತೆಗೆದುಕೊಂಡು ಬಂದು ತಮ್ಮ ದಮ್ ಎಷ್ಟಿದೆ ಎಂಬುದನ್ನು ತೋರಿಸಲಿ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು.