ಕಲಬುರಗಿ: ರಾಜ್ಯದಲ್ಲಿ ಒಂದು ಸಾವಿರ ವೆಂಟಿಲೇಟರ್ ಕೊಳೆಯುತ್ತಿವೆ. ಟೆಕ್ನಿಷಿಯನ್ ಇಲ್ಲದೆ ವೆಂಟಿಲೇಟರ್ ಬಳಕೆ ಆಗುತ್ತಿಲ್ಲ. ಇದರ ಬಗ್ಗೆ ಮುಖ್ಯಮಂತ್ರಿಗಳು ಗಮನ ಹರಿಸಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕ, ಶಾಸಕ ಅಜಯ್ ಸಿಂಗ್ ಆಗ್ರಹಿಸಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವ್ಯಾಕ್ಸಿನೇಷನ್ ಹಾಕುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಪಿಹೆಚ್ಸಿ ಕೇಂದ್ರಗಳಲ್ಲಿ ವ್ಯಾಕ್ಸಿನೇಷನ್ ಕೊರತೆ ಇದೆ. ಕೊರೊನಾ ವಿರುದ್ಧ ಹೋರಾಡಬೇಕು ಅಂದ್ರೆ ವ್ಯಾಕ್ಸಿನೇಷನ್ ಆಗಬೇಕು ಅಂತಾ ಎಕ್ಸಪರ್ಟ್ಸ್ ಹೇಳಿದ್ದಾರೆ. ಆದ್ರೆ ವ್ಯಾಕ್ಸಿನೇಷನ್ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.
ಕೊರೊನಾ ಮೂರನೇ ಅಲೆ ಬಗ್ಗೆ ಪೋಷಕರಲ್ಲಿ ಗಾಬರಿ ಹೆಚ್ಚಾಗಿದೆ. ಮೂರನೇ ಅಲೆ ಬಂದೇ ಬರುತ್ತೆ. ಇದನ್ನ ಯಾರೂ ಕಂಟ್ರೋಲ್ ಮಾಡಲು ಆಗಲ್ಲ. ಜುಲೈ ಅಂತ್ಯ ಅಥವಾ ಆಗಸ್ಟ್ ಆರಂಭದಲ್ಲಿ ಮೂರನೇ ಅಲೆ ಬರುವ ಬಗ್ಗೆ ತಜ್ಞರು ಮಾಹಿತಿ ಕೊಟ್ಟಿದ್ದಾರೆ. ಮೂರನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚಿನ ಹಾನಿ ಆಗಲಿದೆ. ಸದ್ಯ ನಮ್ಮ ಬಳಿ ಉಳಿದಿರೋದು ಎರಡು ತಿಂಗಳು ಮಾತ್ರ. ಎರಡು ತಿಂಗಳಲ್ಲಿ ಸರ್ಕಾರ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು. ಚಿಕಿತ್ಸೆಗೆ ಬೇಕಾಗುವ ಎಲ್ಲಾ ವ್ಯವಸ್ಥೆ ಸರ್ಕಾರ ಮಾಡಿಕೊಳ್ಳಬೇಕು ಎಂದರು.
ಮೊದಲನೇ ಅಲೆಯಲ್ಲಿ ವೃದ್ಧರಿಗೆ, ಎರಡನೇ ಅಲೆಯಲ್ಲಿ ವಯಸ್ಕರಿಗೆ, ಮೂರನೇ ಅಲೆಯಲ್ಲಿ ಕೊರೊನಾ ಮಕ್ಕಳಿಗೆ ಹಾನಿ ಮಾಡುವ ಸಂಭವ ಹೆಚ್ಚಿದೆ. ರಾಜ್ಯದಲ್ಲಿ 4.5 ಲಕ್ಷ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ರಾಜ್ಯದ 12 ಜಿಲ್ಲೆಗಳಲ್ಲಿ ಅಪೌಷ್ಟಿಕ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ಅತೀ ಹೆಚ್ಚು ಅಪೌಷ್ಟಿಕ ಮಕ್ಕಳಿದ್ದಾರೆ. ಅಪೌಷ್ಟಿಕ ಮಕ್ಕಳ ಬಗ್ಗೆ ಸರ್ಕಾರ ಹೆಚ್ಚಿನ ನಿಗಾ ವಹಿಸಬೇಕು ಎಂದು ಅಜಯ್ ಸಿಂಗ್ ಒತ್ತಾಯಿಸಿದ್ದಾರೆ.