ಕಲಬುರಗಿ: ಜಿಲ್ಲೆಯಲ್ಲಿ 40 ಡಿಗ್ರಿಯಷ್ಟು ದಾಖಲಾದ ಬೆಸಿಗೆಯ ಬಿಸಿಲಿನಿಂದ ಬಸವಳಿದ ಜನರಿಗೆ ಶುಕ್ರವಾರ ವರುಣ ತಂಪೇರೆದಿದ್ದಾನೆ. ಗುರವಾರ ಸಂಜೆಯಿಂದ ಜಿಲ್ಲೆಯಲ್ಲಿ ಮಳೆ ಸುರಿಯಲು ಆರಂಭಿಸಿದೆ. ಒಂದೆಡೆ, ಮಳೆಯಿಂದ ಜನ ಖುಷಿಯಾದ್ರೆ, ಇನ್ನೊಂದೆಡೆ, ಬೆಳೆ ನೀರುಪಾಲಾಗಿ ನಷ್ಟ ಸಂಭವಿಸಿದೆ. ನಿನ್ನೆ ಸುರಿದ ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆಗೆ ಓರ್ವ ವೃದ್ಧ ಸಾವನ್ನಪ್ಪಿದ್ದಾರೆ.
ಅಫಜಲಪುರ ತಾಲೂಕಿನ ಬಿಲ್ವಾಡ (ಬಿ) ಗ್ರಾಮದ ರೈತ ಭೋಗಪ್ಪ ಆಲೆನವರ (60) ಜಮೀನಿನಲ್ಲಿ ಕೆಲಸ ಮಾಡುತ್ತಿರುವಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಮೃತರಿಗೆ ಇಬ್ಬರು ಗಂಡು ಮಕ್ಕಳು, ಮೂರು ಜನ ಹೆಣ್ಣು ಮಕ್ಕಳಿದ್ದಾರೆ. ಈ ಕುರಿತು ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿಲ್ಲೆಯ ಹಲವಡೆ ಮಳೆಯಿಂದಾಗಿ ಜೋಳ, ಗೋಧಿ ರಾಶಿ ಮಾಡಿದ ನಂತರ ಇಟ್ಟಿದ್ದ ಮೇವು ಹಾಳಾಗಿದೆ. ಜೊತೆಗೆ ಕಲ್ಲಂಗಡಿ, ದ್ರಾಕ್ಷಿ ಮತ್ತಿತರೆ ತೋಟಗಾರಿಕೆ ಬೆಳೆಗಳು ಅಂತಿಮ ಹಂತದಲ್ಲಿ ಮಳೆಗೆ ಸಿಲುಕಿ ನಷ್ಟವಾಗಿವೆ. ಜೊತೆಗೆ ಆಳಂದ ತಾಲೂಕಿನಲ್ಲಿ ಸಿಡಿಲಿಗೆ ಐದು ಎತ್ತುಗಳು ಸಾವಿಗೀಡಾಗಿವೆ. ತಾಲೂಕಿನ ಕವಲಗಾ ಗ್ರಾಮದ ರೈತ ಮಲ್ಲೇಶಪ್ಪ ನಾಯ್ಕೋಡಿ ಎಂಬುವರು ಹೊಲದ ಕೊಟ್ಟಿಗೆ ಮುಂದಿನ ಮರದ ಕೆಳಗೆ ಕಟ್ಟಿದ ಎತ್ತುಗಳು ಸಿಡಿಲಿನ ಆಘಾತಕ್ಕೆ ಬಲಿಯಾಗಿವೆ. ಹಾಗೆಯೇ, ಹೆಬಳಿ ಗ್ರಾಮದಲ್ಲಿ ರೈತ ರೇವಣಸಿದ್ದ ನಿಂಗಪ್ಪ ನಾಗೂರೆ ಅವರ ಹೊಲದಲ್ಲಿ ಗಿಡದ ಕೆಳಗೆ ಕಟ್ಟಿದ ಎತ್ತು, ಸಂಗೋಳಗಿ (ಸಿ) ಗ್ರಾಮದ ರೈತ ಅರವಿಂದ ಕಲ್ಯಾಣಪ್ಪ ಪೂಜಾರಿ ಅವರ ಹೊಲದಲ್ಲಿ ಕಟ್ಟಿದ ಎತ್ತು ಹಾಗೂ ಸುಂಟನೂರು ಗ್ರಾಮದ ರೈತ ದೇವಾನಂದ ಚನ್ನಬಸಪ್ಪ ಅವರಿಗೆ ಸೇರಿದ ಎತ್ತು ಸಿಡಿಲು ಬಡಿದು ಸ್ಥಳದಲ್ಲಿ ಮೃತಪಟ್ಟಿವೆ. ಅದರಂತೆ ಅಫಜಲಪುರ ತಾಲೂಕಿನ ಅವರಳ್ಳಿ ಗ್ರಾಮದ ಹೊಲವೊಂದರ ಮರದ ಕೆಳಗೆ ಕಟ್ಟಿದ್ದ ನಾಲ್ಕು ಎತ್ತುಗಳು ಸಹ ಸಿಡಿಲಿನಿಂದ ದುರ್ಮರಣ ಹೊಂದಿವೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ಕಲಬುರಗಿ ಜಿಲ್ಲೆಯಾದ್ಯಂತ ಮುಂದುವರೆದ ವರುಣಾರ್ಭಟ.. ಜನ ಹೈರಾಣ
ಶುಕ್ರವಾರ ಮಧ್ಯಾಹ್ನದ ಹೊತ್ತಿಗೆ ಜಿಲ್ಲೆಯಲ್ಲಿ ಒಂದಿಷ್ಟು ಬಿಸಿಲು ಮೂಡಿತ್ತು. ಸ್ವಲ್ಪ ಹೊತ್ತಿನ ಬಳಿಕ ಮತ್ತೆ ಮೋಡ ಕವಿದ ವಾತಾವರಣ ಹಾಗೂ ತಣ್ಣನೆಯ ಗಾಳಿ ಬೀಸಿದ್ದು, ಶನಿವಾರ ಮತ್ತೆ ಮಳೆ ಬರುವ ಸಾಧ್ಯತೆ ಇದೆ.
ಅತ್ಯಾಚಾರ ಆರೋಪಿಗೆ 20 ವರ್ಷ ಸಜೆ: ಜಿಲ್ಲಾ ಮತ್ತು ಸತ್ರ (ವಿಶೇಷ ಪೋಕ್ಸೋ) ನ್ಯಾಯಾಲಯ ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 20 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಯಾದಗಿರಿ ಜಿಲ್ಲೆಯ ಕೆಂಭಾವಿಯ ಫಹೀಮ್ ಪಟೇಲ್ ಖಮ್ರೋದ್ದಿನ್ ಶಿಕ್ಷೆಗೆ ಗುರಿಯಾದ ಆರೋಪಿ. ಕಳೆದ 2021ರಲ್ಲಿ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ. ಈ ಸಂಬಂಧ ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪಿಐ ಎಸ್.ಅಸ್ಲಂಭಾಷಾ ಅವರು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಅಪರ ಜಿಲ್ಲಾ ಮತ್ತು ಸತ್ರ (ವಿಶೇಷ ಪೋಕ್ಸೋ) ನ್ಯಾಯಾಲಯ ಎಫ್.ಟಿ.ಎಸ್.ಸಿ. ನ್ಯಾಯಾಧೀಶರಾದ ಯಮನಪ್ಪ ಬಮ್ಮಣಗಿ ಅವರು ಆರೋಪಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 20 ಸಾವಿರ ರೂ.ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ನೊಂದ ಬಾಲಕಿಗೆ ತೀರ್ಪಿನ ದಿನಾಂಕದಿಂದ 1 ತಿಂಗಳ ಅವಧಿಯೊಳಗೆ ಕಾನೂನು ಪ್ರಾಧಿಕಾರದ ವತಿಯಿಂದ 7 ಲಕ್ಷ ರೂ.ಪರಿಹಾರ ನೀಡಬೇಕು ಎಂದು ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಶಾಂತವೀರ ಬಿ.ತುಪ್ಪದ ಅವರು ವಾದ ಮಂಡಿಸಿದ್ದರು.