ಸೇಡಂ: ತಾಲೂಕಿನಲ್ಲಿಯೇ ದೊಡ್ಡ ಊರು ಎಂದು ಕರೆಸಿಕೊಳ್ಳುವ ಗ್ರಾಮ ಇದು. ಆದರೆ ಅಭಿವೃದ್ಧಿಯಲ್ಲಿ ಮಾತ್ರ ತೀರಾ ಹಿಂದುಳಿದಿದೆ. ನಗರ ಪ್ರದೇಶದಿಂದ 20 ಕಿ.ಮೀ. ದೂರದಲ್ಲಿರುವ, ತೆಲಂಗಾಣ ಗಡಿಗೆ ಹೊಂದಿಕೊಂಡಿರುವ ಮುಧೋಳ ಗ್ರಾಮ ಅಭಿವೃದ್ಧಿಯಲ್ಲಿ ಹಿಂದುಳಿದಿದ್ದು, ಪ್ರತಿನಿತ್ಯ ಸಾರ್ವಜನಿಕರು ಹಿಡಿಶಾಪ ಹಾಕುವಂತಾಗಿದೆ.
ಜನಪ್ರತಿನಿಧಿಗಳ ನಿರ್ಲಕ್ಷ್ಯವೋ, ಗ್ರಾಮ ಪಂಚಾಯತಿಯ ಅಲಕ್ಷ್ಯವೋ ಗೊತ್ತಿಲ್ಲ. ಆದರೆ ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತ್ತದೆ. ಕುಡುಕರ ಅಡ್ಡೆಯಾಗಿ ಮಾರ್ಪಟ್ಟಿದ್ದ ಬಸ್ ನಿಲ್ದಾಣವನ್ನು ಕೆಲ ತಿಂಗಳುಗಳ ಹಿಂದಷ್ಟೇ ಯುವ ಬ್ರಿಗೇಡ್ ಕಾರ್ಯಕರ್ತರು ಸ್ವಚ್ಛಗೊಳಿಸುವ ಮೂಲಕ ಮಾದರಿ ಎನಿಸಿಕೊಂಡಿದ್ದರು. ಆದರೂ ಸಹ ಬಸ್ ನಿಲ್ದಾಣದ ನಿರ್ವಹಣೆಯಲ್ಲಿ ಸಾರಿಗೆ ಇಲಾಖೆ ಕಾಳಜಿ ವಹಿಸದಿರುವುದು ಇಂದಿಗೂ ಎದ್ದು ಕಾಣುತ್ತಿದೆ.
ಗ್ರಾಮದ ಬಸ್ ನಿಲ್ದಾಣ, ಅಂಚೆ ಕಚೇರಿ ಎದುರುಗಡೆ, ಬಿಎಸ್ಎನ್ಎಲ್ ಕಚೇರಿ ರಸ್ತೆ, ಜಿಪಿಎಸ್ ಶಾಲೆ ಹಾಗೂ ಸಮುದಾಯ ಆರೋಗ್ಯ ಕೇಂದ್ರದ ಮುಂಭಾಗದಲ್ಲಿ ಸರಿಯಾದ ರಸ್ತೆ, ಚರಂಡಿಗಳಿಲ್ಲದ ಪರಿಣಾಮ ಪ್ರಮುಖ ರಸ್ತೆಗಳೇ ಹೊಂಡಗಳಾಗಿ ಮಾರ್ಪಟ್ಟಿವೆ. ಮಳೆಗಾಲವಾದ್ದರಿಂದ ಎಲ್ಲೆಂದರಲ್ಲಿ ನೀರು ನಿಂತುಕೊಂಡು ಜನ ಸಂಚಾರಕ್ಕೆ ಸಂಚಕಾರ ತಂದೊಡ್ಡಿದೆ. ಕೆಲವೆಡೆ ಇರುವ ಚರಂಡಿಗಳನ್ನೂ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಇನ್ನು ಕೆಲವೆಡೆ ಚರಂಡಿಗಳೇ ಇಲ್ಲ. ಇದರಿಂದ ಮಳೆ ನೀರು ತುಂಬಿ, ರಸ್ತೆ ಮೇಲೆ ಹರಿಯುತ್ತಿದೆ. ಜೊತೆಗೆ ರೋಗದ ಭೀತಿ ಜನರನ್ನು ಕಾಡುತ್ತಿದೆ. ಗ್ರಾಮದ ಬಹುತೇಕ ಕಡೆಗಳಲ್ಲಿ ಕಸದ ರಾಶಿ ಎದ್ದು ಕಾಣುತ್ತಿದೆ.