ಕಲಬುರಗಿ: ಜಿಲ್ಲೆಯಲ್ಲಿ ಸಹೋಧರರಿಬ್ಬರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರ ಹತ್ಯೆ ಮಾಡಿದವನಿಗೆ ಮೂರನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 25 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ. ಕಮಲಾಪುರ ತಾಲೂಕಿನ ತಡಕಲ್ ಗ್ರಾಮದ ಚಂದ್ರಪ್ಪ ವಾಲಿಕಾರ (27) ಶಿಕ್ಷೆಗೆ ಗುರಿಯಾದ ವ್ಯಕ್ತಿ. ತಡಕಲ್ ಗ್ರಾಮದಲ್ಲಿ 2021ರ ಜನವರಿ 15 ರಂದು ಬೆಳಗ್ಗೆ 9ಗಂಟೆ ಸುಮಾರಿಗೆ ನೀಲೇಶ ಮೋರೆ ಹಾಗೂ ಈತನ ತಮ್ಮ ರಾಜು ಮೋರೆ ಎಂಬ ಇಬ್ಬರನ್ನು ಚಂದ್ರಪ್ಪ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ಪ್ರಕಟ ಮಾಡಲಾಗಿದೆ.
ಕೊಲೆ ಪ್ರಕರಣದ ಹಿನ್ನಲೆ ಏನು?: ಕೊಲೆಯಾದ ನೀಲೇಶ ಮೋರೆ ತನ್ನ ಮದುವೆಗೂ ಮುನ್ನ ಆರೋಪಿ ಚಂದ್ರಪ್ಪನ ಅಕ್ಕನ ಹಿಂದೆ ಬಿದ್ದಿದ್ದನಂತೆ, ನೀಲೇಶ ತನ್ನ ಮದುವೆ ನಂತರವೂ ಚಂದ್ರಪ್ಪನ ಅಕ್ಕನೊಂದಿಗೆ ಸಂಬಂಧ ಇಟ್ಟುಕೊಂಡಿದ್ದಾನೆ ಎಂದು ಸಂಶಯಗೊಂಡ ಚಂದ್ರಪ್ಪ ಆಗಾಗ ನೀಲೇಶ ಜೊತೆ ಜಗಳ ಆಡ್ತಿದ್ದನಂತೆ. ಹೀಗಿರುವಾಗ 2021ರ ಜನವರಿ 15 ರಂದು ಬೆಳಗ್ಗೆ 9ಗಂಟೆ ಸುಮಾರಿಗೆ ನೀಲೇಶ ಹಾಗೂ ಆತನ ಸಹೋದರ ರಾಜು ಇಬ್ಬರು ನಡೆದುಕೊಂಡು ಹೋಗುವಾಗ ಚಂದ್ರಪ್ಪ ಮತ್ತೆ ಜಗಳ ತೆಗೆದಿದ್ದಾನೆ. ಜಗಳ ವಿಕೋಪಕ್ಕೆ ಹೋಗಿದ್ದು, ಮಾರಕಾಸ್ತ್ರದಿಂದ ನೀಲೇಶನಿಗೆ ಕೊಚ್ಚಿ ಕೊಲೆ ಮಾಡಿದ್ದಾನೆ. ಜಗಳ ಬಿಡಿಸಲು ಬಂದ ರಾಜುನ ಮೇಲೆಯೂ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ ಹಿನ್ನೆಲೆ ರಾಜು ಕೂಡಾ ರಕ್ತಸ್ರಾವವಾಗಿ ಮೃತಪಟ್ಟಿದ್ದಾನೆ. ಈ ಕುರಿತು ಮಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿ ವಿರುದ್ಧ 341, 504, 302 ಕಲಂ, 34 ಐಪಿಸಿ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ತನಿಖಾಧಿಕಾರಿ, ಅಂದಿನ ಗ್ರಾಮೀಣ ಠಾಣೆ ವೃತ್ತ ನಿರೀಕ್ಷಕ ಶಂಕರಗೌಡ ಪಾಟೀಲ್ ಅವರು ತನಿಖೆ ನಂತರ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಈ ಕುರಿತಾಗಿ ವಾದ ಪ್ರತಿವಾದ ಆಲಿಸಿದ ಕಲಬುರಗಿ ಮೂರನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಚಂದ್ರಶೇಖರ ಕರೋಶಿ, ಆರೋಪಿ ಕೃತ್ಯ ಎಸಗಿರುವುದು ಸಾಬೀತಾದ ಹಿನ್ನಲೆ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 25 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ 3ನೇ ಅಪರ ಸರಕಾರಿ ಅಭಿಯೋಜಕ ಗುರುಲಿಂಗಪ್ಪ ತೆಲಿ ವಾದ ಮಂಡಿಸಿದ್ದರು.
ವೇಶ್ಯಾವಾಟಿಕೆ ದಂಧೆ, ನಾಲ್ವರ ಬಂಧನ: ಕಲಬುರಗಿ ನಗರದ ನ್ಯೂ ಆರ್‌ಟಿಒ ಕಚೇರಿ ಹತ್ತಿರದ ಕೃಷ್ಣಾ ಆಯುರ್ವೇದಿಕ್ ಎಂಬ ಮನೆಯಲ್ಲಿ ವೇಶ್ಯಾವಾಟಿಕೆ ದಂಧೆ ನಡೆದಿರುವ ಬಗ್ಗೆ ಮಾಹಿತಿ ಕಲೆ ಹಾಕಿದ ಸಿಸಿಬಿ ಪೊಲೀಸರು ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ.
ಪೊಲೀಸರ ದಾಳಿ ವೇಳೆ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಇಬ್ಬರು ಮಹಿಳೆಯರು ಹಿಂದಿನ ಬಾಗಿಲಿಂದ ಪರಾರಿಯಾಗಿದ್ದಾರೆ. ಇನ್ನುಳಿದ ಇಬ್ಬರು ಪುರುಷರು ಮತ್ತು ದಂಧೆ ನಡೆಸ್ತಿದ್ದ ಇಬ್ಬರು ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ. ಮಹಾಂತಪ್ಪ ಹುಡಗಿ, ವೀರುಪಾಕ್ಷಪ್ಪಾ ಸ್ಥಾವರಮಠ ಹಾಗೂ ಹಣ ಪಡೆದು ದಂಧೆೆ ನಡೆಸುತ್ತಿದ್ದ ಆರೋಪದ ಮೇಲೆ ಸೌಮ್ಯಾ ಗುತ್ತೇದಾರ, ಸರೋಜಿನಿ ಗುತ್ತೇದಾರ ಸೇರಿ ಒಟ್ಟು ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಬ್ಬರು ಮಹಿಳಾ ಆರೋಪಿಗಳು ಮಹಿಳೆಯರ ಫೋಟೋಳನ್ನು ಗಿರಾಕಿಗಳ ಮೊಬೈಲ್ಗೆ ಕಳಿಸಿ ಅವರು ಹೇಳುವ ಮಹಿಳೆಯರನ್ನು ಕರೆಸಿ ವೇಶ್ಯಾವಾಟಿಕೆ ನಡೆಸುತ್ತಿದ್ದರಂತೆ, ಸದ್ಯ ಈ ಕುರಿತು ಎಂ.ಬಿ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: 62 ಪ್ರಕರಣ ಭೇದಿಸಿದ ಚನ್ನಗಿರಿ ಪೊಲೀಸರು; ವಾರಸುದಾರರಿಗೆ ₹84 ಲಕ್ಷ ಮೌಲ್ಯದ ವಸ್ತುಗಳು ಹಸ್ತಾಂತರ