ಕಲಬುರಗಿ : ತುಂಡಾಗಿ ಬಿದ್ದಿದ್ದ ಸರ್ವಿಸ್ ವೈರ್ ತಗುಲಿ ತಾಯಿ ಮತ್ತು ಇಬ್ಬರು ಮಕ್ಕಳು ದುರ್ಮರಣ ಹೊಂದಿರುವ ಘಟನೆ ಚಿಂಚೋಳಿ ಪಟ್ಟಣದ ಧನಗರದಲ್ಲಿ ನಡೆದಿದೆ. ಮೃತರನ್ನು ತಾಯಿ ಶರಣಮ್ಮ(45), ಮಕ್ಕಳಾದ ಮುಖೇಶ್ (22) ಮತ್ತು ಸುರೇಶ್ (20) ಎಂದು ಗುರುತಿಸಲಾಗಿದೆ.
ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಆಲಿಕಲ್ಲು ಸಮೇತ ಮಳೆ ಸುರಿಯುತ್ತಿದೆ. ನಿನ್ನೆ(ಶನಿವಾರ) ತಡರಾತ್ರಿ 12 ಗಂಟೆ ಸುಮಾರಿಗೆ ಚಿಂಚೋಳಿಯಲ್ಲಿ ಗುಡುಗು ಮಳೆ ಆರಂಭವಾಗಿತ್ತು. ಮನೆ ಸಮೀಪ ತಂದಿಟ್ಟಿದ್ದ ತೊಗರಿ ಹೊಟ್ಟು ನೆನೆಯುತ್ತದೆ ಎಂದು ಅದನ್ನು ಮುಚ್ಚಲು ಶರಣಮ್ಮ ಹೊರ ಹೋಗಿದ್ದಾರೆ. ಮಕ್ಕಳಾದ ಮುಖೇಶ್, ಸುರೇಶ ಹಿಂಬಾಲಿಸಿ ಹೋಗಿದ್ದು ಮೂವರಿಗೂ ವಿದ್ಯುತ್ ಸ್ಪರ್ಶಿಸಿದೆ.
ಮಡದಿ ಮಕ್ಕಳನ್ನುಅಂಬಣ್ಣಾ ಹುಡುಕಿಕೊಂಡು ಹೋಗಿದ್ದು, ಇವರಿಗೂ ವಿದ್ಯುತ್ ಶಾಕ್ ತಗುಲಿದೆ. ಆದರೆ ಅಪಾಯದಿಂದ ಪಾರಾಗಿದ್ದಾರೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಜೆಸ್ಕಾಂ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೂಕ್ತ ಪರಿಹಾರಕ್ಕೆ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಚಿಂಚೋಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಅಪರಾಧ ಕೃತ್ಯ ತಡೆಯಲು ಚೀತಾ: ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪೊಲೀಸ್ ಇಲಾಖೆ ಚೀತಾ ಗಸ್ತು ವಾಹನ ಸೇವೆ ಆರಂಭಿಸಿದೆ. ಜಿಲ್ಲೆಯಲ್ಲಿ ಇನ್ನು ಎಲ್ಲೇ ಅಪರಾಧ ಕೃತ್ಯಗಳು ನಡೆದರೂ ಚೀತಾ ಸ್ಥಳಕ್ಕೆ ಧಾವಿಸುತ್ತದೆ. ಈ ಮೂಲಕ ಪುಂಡರು, ಕಳ್ಳರ ಹಾವಳಿ ನಿಯಂತ್ರಿಸಲು ಪೊಲೀಸ್ ಇಲಾಖೆ ಮುಂದಾಗಿದೆ.
ಗಸ್ತು ತಿರುಗಲು ರಾಜ್ಯ ಸರ್ಕಾರವು 12 ದ್ವಿಚಕ್ರ ವಾಹನಗಳನ್ನು ನೀಡಿದೆ. ಈ ದ್ವಿಚಕ್ರ ವಾಹನಗಳನ್ನು ಚೀತಾ ವಾಹನಗಳಾಗಿ ಪೊಲೀಸ್ ಇಲಾಖೆಗೆ ಅನುಕೂಲವಾಗುವಂತೆ ಪರಿವರ್ತನೆ ಮಾಡಲಾಗಿದೆ. ನಗರದ ಪ್ರತಿಯೊಂದು ಪೊಲೀಸ್ ಠಾಣೆಗೆ ಒಂದರಂತೆ ಚೀತಾ ವಾಹನ ನೀಡಲಾಗಿದೆ. ಇದು 5 ರಿಂದ 11 ಗಂಟೆ ಮತ್ತು ಸಾಯಂಕಾಲ 5 ರಿಂದ 11 ರವರೆಗೆ ಗಸ್ತು ಸಂಚಾರ ನಡೆಸಲಿದೆ.
ಚೀತಾ ವಾಹನ ವಾಕಿಂಗ್, ತರಕಾರಿ ಖರೀದಿ, ದೇವಸ್ಥಾನಗಳಿಗೆ, ಶಾಲಾ ಕಾಲೇಜುಗಳಿಗೆ ತೆರಳುವವರಿಗೆ ಸುರಕ್ಷತೆ ಒದಗಿಸಲಿದೆ. ನಗರದ ಪ್ರತಿ ಪೊಲೀಸ್ ಠಾಣಾ ವ್ಯಾಪ್ತಿಯ ಆಯಾ ಠಾಣಾ ಸಿಬ್ಬಂದಿ ಬೈಕ್ನಲ್ಲಿ ಗಸ್ತು ತಿರುಗಲಿದ್ದಾರೆ. ಜನರಲ್ಲಿ ಧೈರ್ಯ ತುಂಬಲು ಚೀತಾಗೆ ಸೈರನ್ ಸದ್ದು, ಲೈಟ್ಗಳನ್ನು ಅಳವಡಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಚೇತನ್ ತಿಳಿಸಿದ್ದಾರೆ.
ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಆದ್ಯತೆ: ಮಹಿಳಾ ಶಾಲಾ ಕಾಲೇಜು, ವಸತಿ ನಿಲಯಗಳ ಬಳಿ ಕಂಪ್ಲೆಂಟ್ ಬಾಕ್ಸ್ ಇಡಲು ಪೊಲೀಸ್ ಇಲಾಖೆ ನಿರ್ಧರಿಸಿದೆ. ವಿದ್ಯಾರ್ಥಿನಿಯರಿಗೆ ತೊಂದರೆ ಕೊಡುವಂತಹ ದೂರುಗಳು ಕೇಳಿಬಂದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ. ನಗರದಲ್ಲಿ ಸಂಚಾರ ದಟ್ಟಣೆ ತಡೆಯಲು ವಾಹನ ಹೆಚ್ಚಿನ ಸಿಬ್ಬಂದಿಯನ್ನು ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಒದಗಿಸುವ ಕಾರ್ಯವನ್ನು ಇಲಾಖೆ ಕೈಗೆತ್ತಿಕೊಂಡಿದೆ.
ಇದನ್ನೂ ಓದಿ: ಮನೆ ಕಟ್ಟಲು ಅನುಮತಿಗೂ ಲಂಚ: ಪಂಚಾಯತ್ ಅಧಿಕಾರಿಗಳು ಲೋಕಾಯುಕ್ತ ಬಲೆಗೆ