ಕಲಬುರಗಿ: ಭೀಮಾ ನದಿ ಪ್ರವಾಹದಿಂದ ಜಿಲ್ಲೆಯಲ್ಲಿ ಕೇವಲ ಮನುಷ್ಯರು ಮಾತ್ರವಲ್ಲ ಮೂಕ ಪ್ರಾಣಿಗಳು ತತ್ತರಿಸಿ ಹೋಗಿವೆ.
ಪ್ರವಾಹದಿಂದ ಅಫಜಲಪುರ ತಾಲೂಕಿನ ಬಹುತೇಕ ಪ್ರದೇಶ ಮುಳುಗಡೆಯಾಗಿ ಜನ ಹೈರಾಣಾಗಿದ್ದಾರೆ. ಪ್ರಾಣಿಗಳು ಸಹ ಊಟ ಸಿಗದೆ ಕಂಗಾಲಾಗಿವೆ. ಅಫಜಲಪುರ ಪಟ್ಟಣದ ಹರಿಜನವಾಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹತ್ತಿರ ಸಂಪೂರ್ಣ ಜಲಾವೃತವಾಗಿದ್ದು, ಇದರ ಪಕ್ಕದಲ್ಲಿ ವಾಸವಿದ್ದ ಹಲವು ಮಂಗಗಳಿಗೆ ಜಲಕಂಟಕ ಎದುರಾಗಿದ್ದು, ದಿಕ್ಕು ತೋಚದಂತಾಗಿವೆ.
ಕಳೆದ ನಾಲ್ಕು ದಿನಗಳಿಂದ ಮರ ಏರಿ ಕುಳಿತ ಮಂಗವೊಂದು ನೀರಿಗೆ ಭಯಪಟ್ಟು ಕೆಳಗಡೆಗೆ ಬಂದಿಲ್ಲ. ಮೊದಲನೆ ದಿನ ಸ್ಥಳೀಯರು ಒಂದಿಷ್ಟು ಹಣ್ಣು ಹಂಪಲು , ಆಹಾರ ನೀಡಿದ್ದರು. ಬಳಿಕ ನೀರಿನ ಪ್ರಮಾಣ ಹೆಚ್ಚಾಗಿ ಮರದ ಬಳಿ ಯಾರು ಹೋಗಲು ಸಾಧ್ಯವಾಗಿಲ್ಲ, ಮೂರು ದಿನಗಳಿಂದ ಊಟ ಮಾಡದೆ ಉಪವಾಸದಲ್ಲೇ ಕೋತಿ ಸಂಕಷ್ಟದ ದಿನ ಕಳೆಯುತ್ತಿದೆ. ಮಂಗದ ಮೂಕ ರೋದನೆ ದೇವರೆ ಬಲ್ಲ ಎಂಬಂತಾಗಿದೆ.