ಕಲಬುರಗಿ: ಸುಪ್ರಸಿದ್ಧ ಘತ್ತರಗಿ ಶ್ರೀ ಭಾಗ್ಯವಂತಿ ದೇವಸ್ಥಾನಕ್ಕೆ ಕಳ್ಳರು ನುಗ್ಗಿದ್ದಾರೆ. ಲಕ್ಷಾಂತರ ಮೌಲ್ಯದ ಆಭರಣ, ನಗದು ಕಳುವಾಗಿದೆ. ಮಧ್ಯರಾತ್ರಿ ಮಂಕಿ ಕ್ಯಾಪ್ ಧರಿಸಿ ಬಂದ ಮೂವರು ಗರ್ಭಗುಡಿಯ ಎರಡನೇ ಬಾಗಿಲಿನಿಂದ ಒಳನುಗ್ಗಿ ದೇವರ ಮೈಮೇಲಿನ ಚಿನ್ನ, ಬೆಳ್ಳಿಯ ಆಭರಣಗಳು ಸೇರಿದಂತೆ ಹುಂಡಿಯಲ್ಲಿದ್ದ ಹಣ ಹೊತ್ತೊಯ್ದಿದ್ದಾರೆ. ಚಿಲ್ಲರೆ ನಾಣ್ಯಗಳ ಭಾರ ಹೊರಲಾಗದೆ ಕರಿ ಮಲ್ಲಪ್ಪನ ದೇವಸ್ಥಾನದ ಹತ್ತಿರದ ತಿಪ್ಪೆಗೆ ಎಸೆದಿದ್ದಾರೆ.
ಬೆಳಗಿನ ಜಾವ ಪೂಜೆಗೆಂದು ಅರ್ಚಕರು ದೇವಸ್ಥಾನ ಗರ್ಭಗುಡಿ ಪ್ರವೇಶ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಮುಜರಾಯಿ ಇಲಾಖೆ ವ್ಯಾಪ್ತಿಗೊಳಪಟ್ಟಿರುವ ಘತ್ತರಗಿ ಭಾಗ್ಯವಂತಿ ದೇವಸ್ಥಾನದಲ್ಲಿ ಸಿಸಿ ಕ್ಯಾಮರಾಗಳಿದ್ದು, ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಹೀಗಿದ್ದರೂ ಖದೀಮರು ಕೇವಲ 16 ನಿಮಿಷಗಳಲ್ಲಿ ಕೃತ್ಯ ಎಸಗಿದ್ದಾರೆ.
1974, 2005 ರಲ್ಲೂ ದೇವಸ್ಥಾನದಲ್ಲಿ ಕಳ್ಳತನವಾಗಿತ್ತು. ಇಷ್ಟಾದರೂ ಮುಜರಾಯಿ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ನಿರ್ಲಕ್ಷ್ಯದಿಂದ ಮತ್ತೊಮ್ಮೆ ದೇವಸ್ಥಾನದಲ್ಲಿ ಕಳ್ಳತನವಾಗಿದೆ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳ್ಳತನ ಮಾಡಿ ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಅಫಜಲಪುರ ತಹಶೀಲ್ದಾರ್ ಸಂಜೀವಕುಮಾರ್ ದಾಸರ, ಬೆರಳಚ್ಚು ತಜ್ಞರು, ಶ್ವಾನದಳ ಮತ್ತು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದೆ.
ಇದನ್ನೂ ಓದಿ: ಹೊಸ ವರ್ಷಕ್ಕೆ ಮದ್ಯ ಸಾಗಾಟ: ಪ್ರತ್ಯೇಕ ಪ್ರಕರಣ, ಕೋಟ್ಯಂತರ ಮೌಲ್ಯದ ಮಾಲು ವಶ