ಕಲಬುರಗಿ: ಜಿಲ್ಲೆಯಲ್ಲಿ ಡ್ರಗ್ಸ್, ಜೂಜಾಟ, ಅಕ್ರಮ ಮರಳು ಸಾಗಾಣಿಕೆ, ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಕಡಿವಾಣ ಹಾಕುವವರೇ ಇಲ್ಲದಂತಾಗಿದೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಅಸಮಾಧಾನ ಹೊರಹಾಕಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಡ್ರಗ್ಸ್, ಜೂಜಾಟ, ಬೆಟ್ಟಿಂಗ್, ಅಕ್ರಮ ಮರಳು ಸಾಗಾಣಿಕೆ, ಅಪರಾಧ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅದಕ್ಕೆ ಕಡಿವಾಣ ಹಾಕುವವರು ಇಲ್ಲದಂತಾಗಿದೆ. ಹೊರ ಜಿಲ್ಲೆ ಹಾಗೂ ರಾಜ್ಯದ ಪೊಲೀಸರಿಗೆ ಸ್ಥಳೀಯ ಪೊಲೀಸರ ಮೇಲೆ ನಂಬಿಕೆ ಇಲ್ಲದಂತಾಗಿದೆ. ಗೃಹ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಕಲಬುರಗಿಗೆ ಬಂದು ಮೀಟಿಂಗ್ ಮಾಡಲಿ. ನಾನು ನನ್ನ ಬಳಿ ಇರೋ ದಾಖಲೆಗಳನ್ನು ನೀಡ್ತೇನೆ. ಅದರ ಪ್ರಕಾರ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದ್ದಾರೆ.
ಸರ್ಕಾರ ವಿದ್ಯಾರ್ಥಿಗಳ ಜೀವದ ಜೊತೆ ಚೆಲ್ಲಾಟವಾಡದೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ನಿಯಮಾವಳಿಗಳನ್ನು ರೂಪಿಸಬೇಕು. ಕಳೆದ ಹತ್ತು ತಿಂಗಳಿಂದ ಕಾಲೇಜುಗಳು ಬಂದ್ ಆಗಿವೆ. ಈಗ ಸರ್ಕಾರ ಕಾಲೇಜು ಪುನಾರಂಭಕ್ಕೆ ತಯಾರಿ ನಡೆಸಿದೆ. ಈ ಕುರಿತು ಒಂದು ಸ್ಪಷ್ಟ ನೀಲನಕ್ಷೆ ತಯಾರಾಗಿಲ್ಲ. ಸರ್ಕಾರದ ವಿದ್ಯಾಗಮ ಕಾರ್ಯಕ್ರಮದಿಂದಾಗಿ ಶಿಕ್ಷಕರಿಗೆ, ಮಕ್ಕಳಿಗೆ ಕೊರೊನಾ ಸೋಂಕು ತಗುಲಿದೆ. ಕೆಲ ಶಿಕ್ಷಕರು ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಎಷ್ಟು ಜನಕ್ಕೆ ಪರಿಹಾರ ನೀಡಲಾಗಿದೆ.? ಶಿಕ್ಷಕರನ್ನು ಅಪಾಯದ ಅಂಚಿಗೆ ದೂಡಿ ನೀವು ವಿಧಾನಸೌಧದ ಹವಾನಿಯಂತ್ರಿತ ಕೋಣೆಯಲ್ಲಿ ಇರುವುದು ಯಾವ ನ್ಯಾಯ? ಶಿಕ್ಷಕರನ್ನೇಕೆ ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಿಲ್ಲ ಎಂದು ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ.