ಕಲಬುರಗಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ರಾಸ್ ಬ್ರೀಡ್ ಹೇಳಿಕೆ ವಿಚಾರಕ್ಕೆ ವಸತಿ ಸಚಿವ ವಿ.ಸೋಮಣ್ಣ ಕಿಡಿಕಾರಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಸೋಮಣ್ಣ, ಹಿಂದೂ, ಮುಸ್ಲಿಂ ಅಂತ ಏನಿಲ್ಲ, ಮಿಕ್ಸ್ ಬ್ರೀಡ್ ಆಗಿದೆ ಅನ್ನೋ ಸಿದ್ಧರಾಮಯ್ಯ ಹೇಳಿಕೆಯನ್ನು ಖಂಡಿಸಿದ್ದಾರೆ. ಸಿದ್ದರಾಮಯ್ಯ ಈ ಹಿಂದೆ ಸಿಎಂ ಆದವರು. ಈ ರೀತಿಯಾಗಿ ಕ್ಷುಲ್ಲಕವಾಗಿ ಮಾತನಾಡೋದು ಅವರಿಗೆ ಶೋಭೆ ತರುವಂತಹದ್ದಲ್ಲ. ಸೂಕ್ಷ್ಮತೆ ಅರಿತುಕೊಂಡು ಮಾತನಾಡಬೇಕು ಎಂದರು.
ಕುರುಬ ಸಮಾಜವನ್ನು ಎಸ್ಟಿಗೆ ಸೇರಿಸೋ ವಿಚಾರದಲ್ಲಿ ಆರ್ಎಸ್ಎಸ್ ಕೈವಾಡ ಇದೆ ಅನ್ನೋ ಸಿದ್ದರಾಮಯ್ಯ ಹೇಳಿಕೆಯನ್ನು ಸೋಮಣ್ಣ ಖಂಡಿಸಿದ್ದಾರೆ. ಸಿದ್ದರಾಮಯ್ಯಗೆ ಯಾವಾಗ ಕನಸು ಬೀಳುತ್ತೋ ಗೊತ್ತಿಲ್ಲ. ಎಲ್ಲರಿಗೂ ರಾತ್ರಿ ಕನಸು ಬಿದ್ರೆ ಸಿದ್ದರಾಮಯ್ಯಗೆ ಹಗಲು ಕನಸು ಬೀಳುತ್ತದೆ. ಅವರು ದೊಡ್ಡ ನಾಯಕರು, ದೊಡ್ಡ ನಾಯಕರಾಗಿಯೇ ಇರಬೇಕು. ತನ್ನ ಕೈಲಿ ಆಗಲ್ಲ ಅನ್ನೋದನ್ನು ಮರೆಮಾಚಲು ಸಿದ್ಧರಾಮಯ್ಯ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದರು.
ಸಿದ್ಧರಾಮಯ್ಯ ಹಾಗೂ ಈಶ್ವರಪ್ಪ ಇಬ್ಬರು ಕುರುಬ ಸಮಾಜದ ಕೊಂಡಿಗಳಾಗಿರಬೇಕು. ಎಸ್ಟಿ ಮೀಸಲಾತಿಗಾಗಿ ಪ್ರಯತ್ನ ಮಾಡಬೇಕು. ಅದನ್ನು ಬಿಟ್ಟು ಈ ರೀತಿ ಗೊಂದಲಕಾರಿ ಹೇಳಿಕೆ ನೀಡೋದು ಸರಿಯಲ್ಲ ಎಂದರು.
ಯೋಗೆಶ್ವರ್ಗೆ ಮಂತ್ರಿ ಮಾಡ್ತೀನಿ ಅನ್ನೋ ಸಿಎಂ ವಿಚಾರಕ್ಕೆ ಪ್ರತಿಕ್ರಿಸಿಯಿದ ಸೋಮಣ್ಣ, ಮುಖ್ಯಮಂತ್ರಿ ಅವರಿಗೆ ಅವರದೇ ಆದ ಮಾಹಿತಿ ಇರುತ್ತದೆ. ಆ ಹಿನ್ನೆಲೆಯಲ್ಲಿ ಅನೇಕರನ್ನು ಮಂತ್ರಿ ಮಾಡ್ತಾರೆ. ಕಲಬುರ್ಗಿ ಜಿಲ್ಲೆಗೆ ಕೂಡ ಮಂತ್ರಿ ಸ್ಥಾನ ಸಿಗಬೇಕು. ಕಲಬುರ್ಗಿಗೆ ಮಂತ್ರಿ ಸ್ಥಾನ ಕೊಡುವಂತೆ ನಾವೂ ಒತ್ತಡ ಹಾಕ್ತೇವೆ ಎಂದು ತಿಳಿಸಿದ್ದಾರೆ.