ಕಲಬುರಗಿ: ಕಂದಾಯ ಸಚಿವ ಆರ್ ಅಶೋಕ್ ಅವರು ಜಿಲ್ಲೆಯ ಸೇಡಂ ತಾಲೂಕಿನ ಆಡಕಿ ಗ್ರಾಮ ವಾಸ್ತವ್ಯದಲ್ಲಿ ವಾಸ್ತವ್ಯ ಹೂಡಿದ್ದಾರೆ. ಭಾನುವಾರ ಬೆಳಗ್ಗೆ ಗ್ರಾಮದ ದಲಿತರ ಮನೆಯಲ್ಲಿ ಉತ್ತರ ಕರ್ನಾಟಕದ ವಿಶೇಷ ಜೋಳದ ರೊಟ್ಟಿ ಸವಿದರು.
ಗ್ರಾಮದ ಪರಿಶಿಷ್ಟ ಜಾತಿ ಸಮುದಾಯದ ರೈತ ದಶರಥ ರಾಠೋಡ ಅವರ ಮನೆಗೆ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ, ಬಸವರಾಜ ಮತ್ತಿಮೂಡ, ಜಿಲ್ಲಾಧಿಕಾರಿ ಯಶವಂತ ವಿ ಗುರುಕರ್ ಜೊತೆ ಬೆಳಗಿನ ಉಪಹಾರಕ್ಕೆ ತೆರಳಿ ಜೋಳದ ರೊಟ್ಟಿ ತಿಂದರು. ದಶರಥ ರಾಠೋಡ ಮತ್ತು ವಿಮಲಾಬಾಯಿ ರಾಠೋಡ ಅವರು ಸಚಿವರಿಗೆ ಜೋಳದ ರೊಟ್ಟಿ, ಪುಂಡಿಪಲ್ಯಾ, ಘಟಬ್ಯಾಳಿ, ಹೆಸರುಕಾಳು, ಮೊಸರು, ಶೇಂಗಾ ಹಿಂಡಿ ಜೊತೆಗೆ ಸೌತೆಕಾಯಿ, ಗಜರಿಯನ್ನು ಬಡಿಸಿದರು.
ನಂತರ ಗ್ರಾಮಸ್ಥರ ಸಮಸ್ಯೆ, ಬೇಡಿಕೆಗಳನ್ನು ಸಚಿವರು ಆಲಿಸಿದರು. ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ ಒದಗಿಸಬೇಕೆಂದು ಸಚಿವರಲ್ಲಿ ಗ್ರಾಮದ ಮಹಿಳೆ ಶ್ರೀದೇವಿ ಕೋರಿದರು. ಗ್ರಾಮದಲ್ಲಿ ಬಸ್ ನಿಲ್ದಾಣ ಸ್ಥಾಪಿಸಬೇಕು ಮತ್ತು ಗ್ರಾಮದ ಪುರಾತನ ದೇಗುಲ ಕಸ್ತೂರಿ ರಂಗನಾಥನ ದೇವಸ್ಥಾನ ಜೀರ್ಣೋದ್ಧಾರ ಮಾಡಬೇಕು ಎಂದು ಜಗನ್ನಾಥ ಸ್ವಾಮಿ ಮನವಿ ಮಾಡಿದರು. ಇದಲ್ಲದೇ ರಸ್ತೆ, ಸ್ಮಶಾನ ಭೂಮಿ ಒದಗಿಸಬೇಕೆಂದು ಗ್ರಾಮಸ್ಥರು ಒತ್ತಾಯ ಮಾಡಿದರು.
ಗ್ರಾಮಕ್ಕೆ ರುದ್ರಭೂಮಿ ಮಂಜೂರು ಮಾಡಲಾಗುವುದು. ಇದಕ್ಕೆ ಗ್ರಾಮಸ್ಥರು ಜಮೀನು ನೀಡಲು ಮುಂದೆ ಬಂದಲ್ಲಿ ಉಪ ನೋಂದಣಾಧಿಕಾರಿಗಳ ಕಚೇರಿ ಮೂಲ ದರದ ಮೂರು ಪಟ್ಟು ಹೆಚ್ಚು ಹಣ ನೀಡಿ ಖರೀದಿಸಲಾಗುವುದು ಎಂದು ಸಚಿವ ಆರ್.ಅಶೋಕ್ ಭರವಸೆ ನೀಡಿದರು.
ನಂತರ ಸಚಿವರು ಗ್ರಾಮದ ಕಲ್ಲು ಗಣಿ ಕೂಲಿ ಕಾರ್ಮಿಕನಾಗಿರುವ ಭೋವಿ ಸಮುದಾಯದ ತಾಯಪ್ಪ ಭೋವಿ ಮನೆಯಲ್ಲಿ ಚಹಾ ಸೇವಿಸಿದರು. ನಂತರ ಶ್ಯಾಮ್ ಬುರುಕಲ್ ಮನೆಗೆ ತೆರಳಿದ ಸಚಿವರು, ಅಲ್ಲಿ ಎಳೆ ನೀರು ಸೇವಿಸಿದರು. ಮನೆಗೆ ಬಂದ ಸಚಿವರನ್ನು ಆರತಿ ಬೆಳಗಿ ಸ್ವಾಗತಿಸಿದ ಮಕ್ಕಳಿಗೆ ಸಚಿವರು 1,000 ರೂಪಾಯಿ ದಕ್ಷಿಣೆ ನೀಡಿದರು.
ಇದನ್ನೂ ಓದಿ: ಸೇಡಂನಲ್ಲಿ ಸಚಿವ ಅಶೋಕ್ ಗ್ರಾಮ ವಾಸ್ತವ್ಯ: ಗಾಯಕಿ ಮಂಗ್ಲಿ ಹಾಡಿಗೆ ಪ್ರೇಕ್ಷಕರು ಖುಷ್
ನಂತರ ಗ್ರಾಮಸ್ಥರ ಎದುರು ಆಡಕಿ ಗ್ರಾಮಾಭಿವೃದ್ಧಿಗೆ 1 ಕೋಟಿ ರೂಪಾಯಿ ಅನುದಾನ ಘೋಷಿಸಿದ ಸಚಿವರು, ಈ ಹಣ ಇಂದು ಅಥವಾ ನಾಳೆ ಡಿಸಿ ಅವರಿಗೆ ನೀಡಲಾಗುತ್ತದೆ. ಗ್ರಾಮಸ್ಥರೇ ಪರಸ್ಪರ ಚರ್ಚಿಸಿ ಗ್ರಾಮದಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ ರಸ್ತೆ, ಚರಂಡಿ, ಕೆರೆ ಅಭಿವೃದ್ಧಿ, ಬಡವರಿಗೆ ಮನೆ ನಿರ್ಮಾಣ, ಕುಡಿಯುವ ನೀರು ಹೀಗೆ ಯಾವ ಕಾಮಗಾರಿಯನ್ನು ಮಾಡಬೇಕೆಂದು ನಿರ್ಧರಿಸಿ ಜಿಲ್ಲಾಧಿಕಾರಿಗಳಿಗೆ ತಿಳಿಸಿದಲ್ಲಿ ಅವರು ಕೂಡಲೇ ಅನುಮೋದನೆ ನೀಡಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ತಿಳಿಸಿದರು.