ಕಲಬುರಗಿ: ಅಹಿಂಸೋ ಪರಮಧರ್ಮೋ ಅನ್ನುವ ಸಂದೇಶವನ್ನ ಜಗತ್ತಿಗೆ ಸಾರುವ ಮೂಲಕ ತಪಗೈದ ಆಧ್ಯಾತ್ಮಿಕ ಲೋಕದ ಕೊಂಡಿಯೊಂದು ಕಳಚಿದ್ದು ಅಸಾಂಖ್ಯಾತ ಭಕ್ತ ವೃಂದ ಅನಾಥವಾಗಿದೆ. ಮಾಣಿಕ್ಯಗಿರಿ ಬೆಟ್ಟದ ನಡೆದಾಡುವ ದೇವರು ಅಂತಾನೇ ಖ್ಯಾತಿ ಪಡೆದ ಮಾತಾ ಮಾಣಿಕೇಶ್ವರಿ ಲಿಂಗೈಕ್ಯರಾಗಿದ್ದು, ಮಹಾ ಮಾಯೆಯ ಅಂತಿಮ ದರ್ಶನಕ್ಕೆ ಗಣ್ಯಾತಿ ಗಣ್ಯರು ಆಗಮಿಸುತ್ತಿದ್ದಾರೆ. ಆ ಸ್ಥಳದಲ್ಲಿ ಭಕ್ತರ ದುಃಖ ಮಡುಗಟ್ಟಿದೆ.
ಕಲ್ಯಾಣ ಕರ್ನಾಟಕ ಭಾಗದ ಆರಾದ್ಯ ದೈವ ಅಂತಾನೇ ಸುಪ್ರಸಿದ್ದಿ ಪಡೆದ ಮಾತಾ ಮಾಣಿಕೇಶ್ವರಿ ಅಗಲಿಕೆಯಿಂದ ಲಕ್ಷಾಂತರ ಭಕ್ತರ ದುಃಖ ಸಾಗರದಲ್ಲಿ ಮುಳುಗಿ ಹೋಗಿದ್ದಾರೆ. ಜಿಲ್ಲೆಯ ಸೇಡಂ ತಾಲೂಕಿನ ಯಾನಾಗುಂದಿ ಗ್ರಾಮದ ಬಳಿಯ ಮಾಣಿಕ್ಯಗಿರಿ ಬೆಟ್ಟದ ಮಾತಾ ಮಾಣಿಕೇಶ್ವರಿ ವಯೋಸಹಜ ಕಾಯಿಲೆಯಿಂದ ನಿನ್ನೆ ಇಹಲೋಕ ತೆಜಿಸಿದ್ದಾರೆ.
ಅಹಿಂಸಾಯೋ ಗಿ ಮಾತೆಯ ದರ್ಶನಕ್ಕೆ ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್, ಸಂಸದ ಉಮೇಶ್ ಜಾಧವ್, ಶಾಸಕರಾದ ರಾಜಕುಮಾರ ಪಾಟೀಲ್ ತೆಲ್ಕುರ್, ಡಾ. ಅಜಯ್ ಸಿಂಗ್, ಎಂಎಲ್ಸಿಗಳಾದ ಬಿ ಜಿ ಪಾಟೀಲ, ತಿಪ್ಪಣಪ್ಪ ಕಮಕನೂರ ಹಾಗೂ ಅನೇಕ ಮಠಾಧೀಶರು ಜತೆಗೆ ರಾಜ್ಯ-ರಾಜ್ಯಗಳಾದ ಆಂಧ್ರ, ತೆಲಂಗಾಣ, ಮಹಾರಾಷ್ಟ್ರದಿಂದ ಭಕ್ತರ ದಂಡು ಹರಿದು ಬರುತ್ತಿದೆ.
ಅಮ್ಮನವರ ಅಂತಿಮ ದರ್ಶನಕ್ಕೆ ಬರುತ್ತಿರುವ ಭಕ್ತರಿಗೆ ಜಿಲ್ಲಾಡಳಿತ ಸಕಲ ವ್ಯವಸ್ಥೆ ಮಾಡಿದೆ. ನಾಳೆ ಮಧ್ಯಾಹ್ನ 12 ಗಂಟೆವರೆಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಟ್ಟಿದೆ. ನಂತರ ಅಮ್ಮನವರ ಆಶಯದಂತೆ ಮಾಣಿಕ್ಯಗಿರಿ ಗುಹೆಯಲ್ಲಿರುವ ಶಿಲಾ ಮಂಟಪದಲ್ಲಿ ಅಮ್ಮನವರ ಅಂತ್ಯ ಸಂಸ್ಕಾರ ನಡೆಯಲಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಯಲಿದೆ.
ಕೊಲಿ ಸಮಾಜದಲ್ಲಿ ಜನಿಸಿದ ಮಾತಾ ಮಾಣಿಕೇಶ್ವರಿ ಅಹಿಂಸೆ ಮಾರ್ಗದಲ್ಲಿ ಶಿವಧ್ಯಾನ ಮಾಡುವ ಮೂಲಕ ಲಿಂಗಪೂಜೆ ಮಾಡುತ್ತಿರುವುದರಿಂದ ವೀರಶೈವ ವಿಧಿ ವಿಧಾನಗಳಿಂತೆ ಅಮ್ಮನವರ ಅಂತ್ಯಸಂಸ್ಕಾರ ನಡೆಯಲಿದೆ. ಅಂತ್ಯಸಂಸ್ಕಾರದಲ್ಲಿ 5001 ವಿಭೂತಿಗಳು, ಹಿಂದು ಧರ್ಮದ ವೇದಶಾಸ್ತ್ರೋಕ್ತವಾಗಿ ವಿಧಿ-ವಿಧಾನ ಕಾರ್ಯಗಳು ಜರುಗಲಿವೆ. 10ರಿಂದ 15 ಸ್ವಾಮೀಜಿಗಳಿಂದ ಅಂತ್ಯ ಸಾಂಸ್ಕಾರ ನಡೆಯಲಿದೆ ಎಂದು ಆಶ್ರಮದ ಆಡಳಿತ ಮಂಡಳಿ ಮಾಹಿತಿ ನೀಡಿದೆ.