ಯಾದಗಿರಿ : ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಸೋಲು ನಿಶ್ಚಿತ ಎಂದು ಮಾಜಿ ಸಚಿವ ಮಾಲಕರೆಡ್ಡಿ ಭವಿಷ್ಯ ನುಡಿದಿದ್ದಾರೆ.
ಯಾವಾಗೋ ಸೋಲಬೇಕಾದ ಖರ್ಗೆಯನ್ನು ನಾವು ಪ್ರೋತ್ಸಾಹ ನೀಡುತ್ತ ಬಂದಿದ್ದರ ಪರಿಣಾಮ ಖರ್ಗೆ ಗೆಲ್ಲುತ್ತಿದ್ದರು. ಆದರೆ, ಈ ಬಾರಿ ಖರ್ಗೆ ಅವರ ನಿಜವಾದ ಮುಖವಾಡ ಕಳಚಿ ಬೀಳಲಿದೆ . ತಂದೆ, ಮಗನ ಆಟಕ್ಕೆ ಜನರು ಬ್ರೇಕ್ ಹಾಕುತ್ತಾರೆ ಎಂದು ವ್ಯಂಗ್ಯವಾಡಿದರು.
ಖರ್ಗೆ ಮೋಸದಾಟದಿಂದ ಸಾಕಷ್ಟು ಹಿರಿಯ ನಾಯಕರು ರಾಜಕೀಯ ರಂಗದಿಂದ ನಿವೃತ್ತಿ ಹೊಂದಿದರು. ಸಾಕಷ್ಟು ಪ್ರಭಾವಿ ಮುಖಂಡರು ಪಕ್ಷವನ್ನು ತೊರೆದು ತಮ್ಮ ನೋವನ್ನು ಸಹಿಸಿಕೊಂಡಿದ್ದಾರೆ. ಮಾಜಿ ಸಚಿವ ಬಾಬುರಾವ್ ಅವರ ಬದಲು ತಮ್ಮ ಪುತ್ರ ಪ್ರಿಯಾಂಕ್ ಖರ್ಗೆಗೆ ಸಚಿವ ಸ್ಥಾನ ನೀಡಿದರು. ಮಾಲಿಕಯ್ಯ ಗುತ್ತೆದಾರ ತಂದೆ ಮಗನ ಆಟಕ್ಕೆ ಬೇಸತ್ತು ಹೊರ ಬಂದಿದ್ದಾರೆ ಎಂದು ಕಿಡಿಕಾರಿದರು.
ಮೋದಿ ಹವಾದಿಂದ ಖರ್ಗೆ ವರ್ಚಸ್ಗೆ ಧಕ್ಕೆ ಉಂಟಾಗಲಿದೆ. ಮುಂದಿನ ದಿನಗಳಲ್ಲಿ ಖರ್ಗೆ ಕಲಬುರಗಿಯಿಂದ ಗಂಟು ಮೂಟೆ ಕಟ್ಟಿಕೊಂಡು ಓಡಿ ಹೋಗಬೇಕು. ಖರ್ಗೆಯ ನಿಜವಾದ ಬಣ್ಣ ಫಲಿತಾಂಶದಲ್ಲಿ ಹೊರಬೀಳಲಿದೆ ಎಂದು ಹೇಳಿದರು.