ಕಲಬುರಗಿ : ಕಾಗಿಣಾ ನದಿ ತಟದಲ್ಲಿರುವ ಮಳಖೇಡ ಜಯತೀರ್ಥರ ಮೂಲ ಬೃಂದಾವನ ಉತ್ತರಾಧಿ ಮಠದಲ್ಲಿ ಮೂರು ದಿನಗಳ ಕಾಲ ಅದ್ಧೂರಿಯಾಗಿ 'ನ್ಯಾಯಸುಧಾ ಮಂಗಳ ಮಹೋತ್ಸವ' ಜರುಗಿದ್ದು, ಶನಿವಾರ ಉತ್ಸವಕ್ಕೆ ತೆರೆ ಬಿದ್ದಿದೆ.
ಮಾ.10 ರಿಂದ 12ರವರೆಗೆ ನ್ಯಾಯಸುಧಾ ಉತ್ಸವ ನಡೆದಿದೆ. ಅನೇಕ ಯತಿಗಳು ಈ ಉತ್ಸವದಲ್ಲಿ ಭಾಗಿಯಾಗಿದ್ದರು. ನಾಡಿನ ಅನೇಕ ಭಕ್ತರು ಉತ್ಸವಕ್ಕೆ ಸಾಕ್ಷಿಯಾಗಿದ್ದರು.
ಉತ್ತರಾದಿ ಮಠಾಧೀಶರಾದ ಸತ್ಯಾತ್ಮತೀರ್ಥ ಶ್ರೀಪಾದರು ಆದಿಯಾಗಿ ಮಧ್ವ ಪೀಠಗಳ ಅನೇಕ ಯತಿಗಳು ಉತ್ಸವದಲ್ಲಿ ಭಾಗಿಯಾಗಿದ್ದರು. ಉತ್ತರಾದಿಮಠದ ಪೀಠಾಧಿಪತಿಗಳಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳವರು ಮಹೋತ್ಸವಕ್ಕೆ ಚಾಲನೆ ನೀಡಿದ್ದು, ಮೂರು ದಿನಗಳ ಕಾಲ ಪ್ರವಚನ ನೀಡಿದರು.
ಬೆಂಗಳೂರಿನ ಶ್ರೀ ಜಯತೀರ್ಥ ವಿದ್ಯಾಪೀಠದ ವೇದಾಂತ ವಿದ್ಯಾರ್ಥಿಗಳು ನ್ಯಾಯಸುಧಾ ಮಂಗಳ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು. ಬೆಂಗಳೂರು ಸೇರಿ ಹಲವು ಜಿಲ್ಲೆಯ ಭಕ್ತರು ಆಗಮಿಸಿ ಮೂಲ ಬೃಂದಾವನದ ದರ್ಶನ ಪಡೆದರು. ಬಂದ ಭಕ್ತರೆಲ್ಲರೂ ಪ್ರಸಾದ ಸ್ವೀಕರಿಸಿ ಧನ್ಯರಾದರು.
ಏನಿದು ನ್ಯಾಯಸುಧಾ ಉತ್ಸವ?: ಮಧ್ವ ಸಿದ್ದಾಂತದಲ್ಲಿ ಟೀಕಾರಾಯರು ರಚಿಸಿರುವ ನ್ಯಾಯಸುಧಾ ಗ್ರಂಥ ಒಂದು ಮೇರುಕೃತಿ. ವೇದಾಂತ ಅಧ್ಯಯನದಲ್ಲಿ ತೊಡಗುವವರು 14 ವರ್ಷಗಳ ಕಾಲ ಗುರುಕುಲದಲ್ಲಿ ಅಧ್ಯಯನ ಮಾಡಿ ನಂತರ ಕೊನೆಯಲ್ಲಿ ಸುಧಾ ಗ್ರಂಥ ಅಭ್ಯಾಸ ಮಾಡುತ್ತಾರೆ.
ಈ ಗ್ರಂಥದ ಅಧ್ಯಯನ ಆಧರಿಸಿಯೇ ವಿದ್ಯಾರ್ಥಿಗಳ ಪಾಂಡಿತ್ಯ ನಿರ್ಧಾರವಾಗುತ್ತದೆ. ಹೀಗೆ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆಂದು ಘೋಷಿಸಿ ಶುಭ ಕೋರುವ ಉತ್ಸವವೇ ನ್ಯಾಯಸುಧಾ ಮಂಗಳ ಮಹೋತ್ಸವ. ಇನ್ನೊಂದು ಅರ್ಥದಲ್ಲಿ ಇದು ವೇದಾಂತ ವಿದ್ಯಾರ್ಥಿಗಳ ಪಾಲಿನ ಘಟಿಕೋತ್ಸವ.