ಕಲಬುರಗಿ : ರಾಜ್ಯ ಬಿಜೆಪಿ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ್ ಮತ್ತವರ ಸಹೋದರ ನಿತಿನ್ ಗುತ್ತೇದಾರ್ ನಡುವೆ ಬಿಜೆಪಿ ಟಿಕೆಟ್‌ಗಾಗಿ ಬಿರುಸಿನ ಪೈಪೋಟಿ ಪ್ರಾರಂಭವಾಗಿದೆ. ಜಿಲ್ಲೆಯ ಅಫಜಲ್ಪುರ ಕ್ಷೇತ್ರದ ಟಿಕೆಟ್ ಮೇಲೆ ಕಣ್ಣಿಟ್ಟಿರುವ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ನಿತೀನ್ ಗುತ್ತೇದಾರ್ ಯುವಪಡೆ ಕಟ್ಟಿಕೊಂಡು ಕ್ಷೇತ್ರದಲ್ಲಿ ಬಿರುಸಿನ ಸಂಚಾರ ಪ್ರಾರಂಭಿಸಿದ್ರೆ, ಇತ್ತ ನನ್ನ ಮೇಲೆ ನನ್ನ ತಮ್ಮನನ್ನು ಎತ್ತಿ ಕಟ್ಟಿ ಟಿಕೆಟ್ ತಪ್ಪಿಸಲು ಜಿಲ್ಲಾ ಬಿಜೆಪಿಗರು ಷಡ್ಯಂತ್ರ ನಡೆಸಿದ್ದಾರೆ ಎಂದು ಮಾಲೀಕಯ್ಯ ಗುತ್ತೇದಾರ್ ನೇರ ಆರೋಪ ಮಾಡಿ ಅಸಮಾಧಾನ ಹೊರಹಾಕಿದರು.
ಸಹೋದರರ ಫೈಟ್: ಕಳೆದ ಲೋಕಸಭಾ ಚುನಾವಣೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಲಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾಲೀಕಯ್ಯ ಗುತ್ತೇದಾರ್ ಈ ಬಾರಿ ತಮ್ಮದೇ ಟಿಕೆಟ್‌ಗಾಗಿ ಪೈಪೋಟಿ ನಡೆಸುವ ಅನಿವಾರ್ಯತೆಯಲ್ಲಿದ್ದಾರೆ. ಅಫಜಲ್ಪುರ ಕ್ಷೇತ್ರದಿಂದ 7ನೇ ಬಾರಿಗೆ ಆಯ್ಕೆ ಬಯಸಿ ಮಾಲೀಕಯ್ಯ ಗುತ್ತೇದಾರ್ ಕಣಕ್ಕೆ ಎಂಟ್ರಿ ಕೊಡಲು ತಯಾರಿ ನಡೆಸುತ್ತಿದ್ದಾರೆ. ಆದ್ರೆ, ಅಣ್ಣನೆದುರಿಗೆ ತಮ್ಮನೂ ಅದೇ ಟಿಕೆಟ್‌ಗೆ ಬಿರುಸಿನ ಕಸರತ್ತು ನಡೆಸ್ತಿದ್ದಾರೆ. ಆದ್ರೆ ತಮ್ಮನ ಟಿಕೆಟ್ ಪಡೆಯುವ ನಾಗಾಲೋಟಕ್ಕೆ ಬ್ರೇಕ್ ಹಾಕಲು ಮಾಲೀಕಯ್ಯ ಫ್ಯಾಮಿಲಿ ಸೆಂಟಿಮೆಂಟ್ ಅಸ್ತ್ರ ಬೀಸಿದ್ದಾರೆ.
ಕಲಬುರಗಿಯ ಖಾಸಗಿ ಹೋಟೆಲ್ನಲ್ಲಿ ಮಾತನಾಡಿದ ಅವರು, "ಇದನ್ನು ಫ್ಯಾಮಿಲಿ ಚೌಕಟ್ಟಿನಲ್ಲಿ ಬಗೆಹರಿಸ್ಕೋತೀನಿ. ಟಿಕೆಟ್ ಯಾರಿಗೆ ಸಿಕ್ಕರೂ ಒಬ್ಬರಿಗೊಬ್ಬರು ಸಪೋರ್ಟ್ ಮಾಡುತ್ತೇವೆ. ಆದ್ರೆ ಕ್ಷೇತ್ರದ ಜನ ನನಗೆ ಇದೊಂದು ಚಾನ್ಸ್ ಕೊಡಲು ನಿರ್ಧರಿಸಿದ್ದಾರೆ. ಈ ಬಗ್ಗೆ ನಿತಿನ್ಗೂ ಸುದ್ದಿ ತಲುಪಿದೆ. ಆದ್ರೆ ನಾನು ಶಾಸಕನಾದ್ರೆ ಮಂತ್ರಿ ಆಗಬಹುದು ಅನ್ನೋ ಕಾರಣಕ್ಕೆ ಕೆಲ ಬಿಜೆಪಿ ಜಿಲ್ಲಾ ಮುಖಂಡರು ನನ್ನ ತಮ್ಮನನ್ನು ಎತ್ತಿಕಟ್ಟಿ ನನಗೆ ಟಿಕೆಟ್ ತಪ್ಪಿಸಲು ಷಡ್ಯಂತ್ರ ನಡೆಸ್ತಿದ್ದಾರೆ" ಎಂದರು.
ಮುಂದುವರೆದು ಮಾತನಾಡಿ, "ನಮ್ಮ ಪಕ್ಷದ ವರಿಷ್ಠರಿಗೆ ಎಲ್ಲವೂ ಗೊತ್ತಿದೆ. ಪಕ್ಷದ ಏಳಿಗೆಗೆ ಜಿಲ್ಲೆಯಲ್ಲಿ ಮಾಲೀಕಯ್ಯ ಗುತ್ತೇದಾರ್ ಹೇಗೆ ಶ್ರಮಿಸಿದ್ದಾರೆ ಎಂಬ ಮಾಹಿತಿಯೂ ಹೈಕಮಾಂಡ್ಗಿದೆ" ಎಂದು ಹೇಳಿದರು.
ರಾಜ್ಯದಲ್ಲಿ ಬಿಜೆಪಿ ಪರ ಅಲೆ ಇದೆ. 150 ಸೀಟು ಗೆಲ್ಲುವ ತಂತ್ರ ರೂಪಿಸಲಾಗ್ತಿದೆ. ಹೀಗಾಗಿ ಮಧ್ಯಪ್ರದೇಶ, ಗುಜರಾತ್ ರೀತಿಯಲ್ಲಿ ಕರ್ನಾಟಕದಲ್ಲೂ ಬಿಜೆಪಿ ಟಿಕೆಟ್ ಕಟ್ಟಾಗಲಿದೆ. ಜನರೊಂದಿಗೆ ಉತ್ತಮ ಬಾಂಧವ್ಯ, ಶುದ್ದ ಚಾರಿತ್ರ್ಯ ಹೊಂದಿರದ ಹಾಲಿ ಶಾಸಕರು, ಸಚಿವರಿಗೆ ಟಿಕೆಟ್ ಡೌಟು. ಟಿಕೆಟ್ ಆಕಾಂಕ್ಷಿಗಳೆಲ್ಲರ ಚಾರಿತ್ರ್ಯ, ನಡೆನುಡಿಗಳನ್ನು ಹೈಕಮಾಂಡ್ ಗಮನಿಸುತ್ತಿದೆ ಎಂಬ ಸುಳಿವನ್ನು ಗುತ್ತೇದಾರ್ ನೀಡಿದ್ದಾರೆ. ಕಲ್ಯಾಣ ಕರ್ನಾಟಕದಲ್ಲಿ ವಿಶೇಷವಾಗಿ ಮಲ್ಲಿಕಾರ್ಜುನ ಖರ್ಗೆ ಅವರ ತವರು ಜಿಲ್ಲೆ ಕಲಬುರಗಿಯ 9 ಕ್ಷೇತ್ರಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಎಲ್ಲಾ ಕ್ಷೇತ್ರಗಳಲ್ಲಿ ಗೆಲ್ಲುವ ಕಾರ್ಯತಂತ್ರ ಹೆಣೆಯುತ್ತಿದೆ. ಕನಿಷ್ಠ ಏಳು ಕ್ಷೇತ್ರವನ್ನಾದ್ರೂ ನಮ್ಮ ಮಡಿಲಿಗೆ ಹಾಕಿಕೊಳ್ಳುವುದಾಗಿ ಗುತ್ತೇದಾರ್ ಹೇಳಿದರು.
ಇದನ್ನೂ ಓದಿ: ಹಿಂದಿನ ಸರ್ಕಾರಗಳಿಗೆ ಟಿಪ್ಪು ಹೀರೋ: ಅಡ್ಡಂಡ ಕಾರ್ಯಪ್ಪ