ಕಲಬುರಗಿ : ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಚಿರತೆ ಆತಂಕ ಸೃಷ್ಟಿಸಿದೆ. ಆಳಂದ ತಾಲೂಕಿನ ಕೆಲ ಗ್ರಾಮಗಳಲ್ಲಿ ಪದೇ ಪದೆ ಚಿರತೆ ಪ್ರತ್ಯಕ್ಷವಾಗುತ್ತಿದ್ದು, ಗ್ರಾಮಸ್ಥರಲ್ಲಿ ಭಯ ಹುಟ್ಟಿಸಿದೆ. ಹಲವೆಡೆ ಚಿರತೆ ಬಂದು ಹೋಗಿರುವ ಕುರುಹುಗಳು ಪತ್ತೆ ಆಗಿದ್ದು, ಚಿರತೆ ತಿಂದು ಬಿಟ್ಟಿರುವ ನಾಯಿಯ ಕಾಲು ಪತ್ತೆಯಾಗಿದೆ. ಈ ಬೆನ್ನಲ್ಲೇ ಕೆಲ ಕಿಡಿಗೇಡಿಗಳು ಚಿರತೆ ಓಡಾಡುವ ನಕಲಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವುದು ಜನರ ಹೃದಯ ಬಡಿತ ಮತ್ತಷ್ಟು ಹೆಚ್ಚಿಸಿದೆ.
ಹೌದು, ಕರ್ನಾಟಕ - ಮಹಾರಾಷ್ಟ್ರ ಗಡಿಭಾಗವಾದ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕೆಲ ಗ್ರಾಮಗಳಲ್ಲಿ ವಾರದಿಂದ ಚಿರತೆ ಆತಂಕ ಪ್ರಾರಂಭವಾಗಿದೆ. ಬಂಗರಗಾ, ಸಾಲೆಗಾಂವ್ ಸೇರಿದಂತೆ ಕೆಲ ಗ್ರಾಮಗಳಲ್ಲಿ ಚಿರತೆ ಓಡಾಡುತ್ತಿರುವುದನ್ನು ಸಾರ್ವಜನಿಕರು ಗಮನಿಸಿದ್ದು, ಇದಕ್ಕೆ ಪೂರಕ ಕುರುಹುಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಪತ್ತೆ ಮಾಡಿ, ಚಿರತೆ ಇರುವುದನ್ನು ದೃಢಪಡಿಸಿದ್ದಾರೆ.
ಇದನ್ನೂ ಓದಿ : ಶಿವಮೊಗ್ಗದಲ್ಲಿ ಚಿರತೆ ದಾಳಿಗೆ ರೈತ ಮಹಿಳೆ ಬಲಿ.. ಜನರಲ್ಲಿ ಹೆಚ್ಚಿದ ಆತಂಕ
"ಆಳಂದ ಗಡಿ ಭಾಗದ ಬಂಗರಗಾ ಗ್ರಾಮದ ಹತ್ತಿರ ಚಿರತೆ ಹೆಜ್ಜೆ ಗುರುತು ಪತ್ತೆಯಾಗಿದೆ. ಹೀಗಾಗಿ, ಚಿರತೆ ಕಂಡರೆ ಸ್ಥಳೀಯರು ತಕ್ಷಣ ಮಾಹಿತಿ ನೀಡಬೇಕು. ಈಗಾಗಲೇ ಚಿರತೆ ಸೆರೆ ಹಿಡಿಯಲು ಬೋನು ಅಳವಡಿಸಲಾಗಿದೆ. ಕಳೆದ ವಾರ ಸಾಲೇಗಾಂವ್ ಹತ್ತಿರ ನಾಯಿಯ ಕಾಲು ಪತ್ತೆಯಾಗಿತ್ತು. ಇಲ್ಲಿಯವರೆಗೆ ಯಾವುದೇ ಜೀವ ಹಾನಿಯಾಗಿಲ್ಲ. ಚಿರತೆ ಸೆರೆಗೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಎಲ್ಲ ರೀತಿಯ ತಯಾರಿ ಮಾಡಿಕೊಳ್ಳಲಾಗಿದೆ. ಖಜೂರಿ ಹೋಬಳಿಯ ಗ್ರಾಮಸ್ಥರು ಜಾಗ್ರತೆಯಿಂದ ಇರಲು ಹೇಳಿದ್ದಾರೆ. ಆದರೆ, ಕೆಲ ಕಿಡಿಗೇಡಿಗಳು ಚಿರತೆ ಓಡಾಡುವ ಹಳೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಜನರಲ್ಲಿ ಭೀತಿ ಹುಟ್ಟಿಸುವ ಕೆಲಸ ಮಾಡ್ತಿದ್ದಾರೆ. ಜನ ಭಯಪಡಬಾರದು, ಎಚ್ಚರದಿಂದ ಇರಬೇಕು. ಕೆಲವರು ಕರೆ ಮಾಡಿ ಸುಳ್ಳು ಮಾಹಿತಿ ನೀಡುತ್ತಿದ್ದು, ಹಾಗೆ ಮಾಡೋದು ಸರಿಯಲ್ಲ. ಈಗಾಗಲೇ ಅಧಿಕಾರಿಗಳು ಮತ್ತು ಸಿಬ್ಬಂದಿ ಶೋಧ ಕಾರ್ಯದಲ್ಲಿ ತೊಡಗಿದ್ದು, ಶೀಘ್ರವೇ ಸೆರೆ ಹಿಡಿಯಲಾಗುವುದು. ಅಲ್ಲಿಯವರೆಗೆ ಜನರು ಸಹಕರಿಸಬೇಕು" ಎಂದು ಆರ್‌ಎಫ್‌ಒ ಜಗನ್ನಾಥ್ ಕೋರಳ್ಳಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಕಬ್ಬಿನ ಗದ್ದೆಯಲ್ಲಿ ಚಿರತೆ ಮರಿಗಳು ಪ್ರತ್ಯಕ್ಷ.. ತಾಯಿ ಚಿರತೆ ಸೆರೆ ಹಿಡಿಯುವಂತೆ ಮನವಿ
ಇನ್ನು ಚಿರತೆ ಇರೋದು ಪಕ್ಕಾ ಆಗ್ತಿದ್ದಂಗೆ ಗ್ರಾಮಸ್ಥರು ಒಬ್ಬೊಬ್ಬರೇ ಓಡಾಡಲು, ಮಕ್ಕಳನ್ನು ಹೊರಗೆ ಕಳುಹಿಸಲು ಹೆದರುತ್ತಿದ್ದಾರೆ. ಸಂಜೆ ಆಗ್ತಿದ್ದಂಗೆ ಮನೆಗಳಿಗೆ ಸೇರುತ್ತಿದ್ದಾರೆ. ಬಯಲು ಪ್ರದೇಶಗಳಲ್ಲಿ ಮಲಗುತ್ತಿದ್ದವರು ಈಗ ಮನೆಗಳಲ್ಲಿ ಮಲಗುತ್ತಿದ್ದಾರೆ. ಕೃಷಿಕರು ಹೊಲಗದ್ದೆಗೆ ಹೋಗುವಾಗ ಮೈಯೆಲ್ಲಾ ಕಣ್ಣಾಗಿಸಿಕೊಂಡು ಜೀವ ಕೈಯಲ್ಲಿ ಹಿಡಿದು ಓಡಾಡ್ತಿದ್ದಾರೆ. ಹೀಗಾಗಿ, ಶೀಘ್ರವೇ ಚಿರತೆ ಹಿಡಿದು ಆತಂಕ ದೂರು ಮಾಡಬೇಕೆಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ : ಬೆಳಗಾವಿಯಲ್ಲಿ ಪತ್ತೆಯಾಗಿದ್ದು ಚಿರತೆಯಲ್ಲ , ಕಿರುಬ ಬೆಕ್ಕು : ನಿಟ್ಟುಸಿರು ಬಿಟ್ಟ ಜನ