ಕಲಬುರಗಿ: ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ತವರಿನಲ್ಲಿಯೇ ಕಾಮಗ್ರೆಸ್ ಪಕ್ಷವನ್ನು ಕಟ್ಟಿ ಹಾಕಿ ಕೇಸರಿ ಪತಾಕಿ ಹಾರಿಸಲು ಬಿಜೆಪಿ ರಣತಂತ್ರ ರೂಪಿಸಿದೆ. ಖುದ್ದು ಬಿಜೆಪಿ ಚುನಾವಣಾ ಚಾಣಕ್ಯ ಅಮಿತ್ ಶಾ ಇಂದು ಕಲಬುರಗಿಗೆ ಎಂಟ್ರಿ ಕೊಡುವ ಮೂಲಕ ಗೆಲುವಿನ ರಣತಂತ್ರ ರೂಪಿಸಲು ಮುಂದಾಗಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸುವ ಗುರಿಯಲ್ಲಿ ಯಶಸ್ವಿಯಾದ ಕಮಲ ಪಕ್ಷದ ನಾಯಕರು ಈ ಬಾರಿ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ ಅವರನ್ನು ಟಾರ್ಗೆಟ್ ಮಾಡಿದ್ದಾರೆ. ಇದರ ಜೊತೆಗೆ ಜಿಲ್ಲೆಯ 9 ಕ್ಷೇತ್ರಗಳನ್ನು ತಮ್ಮ ಮಡಿಲಿಗೆ ಹಾಕಿಕೊಳ್ಳುವ ಯೋಜನೆ ರೂಪಿಸುತ್ತಿದ್ದಾರೆ. ಈ ಮೂಲಕ ತವರಿನಲ್ಲಿಯೇ ಖರ್ಗೆ ಅವರನ್ನು ಕಟ್ಟಿಹಾಕುವ ಕೆಲಸಕ್ಕೆ ಕೇಸರಿ ಪಡೆಯ ನಾಯಕರು ಮುಂದಾಗಿದ್ದಾರೆ.
ಇದನ್ನೂ ಓದಿ: ರಂಗೇರಿದ ಚುನಾವಣಾ ಕಣ: ಮೋದಿ, ಯೋಗಿಯಿಂದ ನಡೆಯಲಿದೆ ರಾಜ್ಯದಲ್ಲಿ ಚುನಾವಣಾ ಪ್ರಚಾರ
ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಸೇರಿ ಮೊದಲ ಸಾಲಿನ ಘಟಾನುಘಟಿ ನಾಯಕರು ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಮೇ ತಿಂಗಳ ಮೊದಲ ವಾರದಲ್ಲಿ ಕಲಬುರಗಿ ಮತ್ತು ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ ಸ್ಪರ್ಧಿಸುವ ಚಿತ್ತಾಪುರ ಕ್ಷೇತ್ರಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿ ರೋಡ್ ಶೋ, ಬಹಿರಂಗ ಸಭೆಗೆ ನಡೆಸಲಿದ್ದಾರೆ. ಮೋದಿ ಆಗಮನಕ್ಕೂ ಮುನ್ನ ಇಂದು ಜಿಲ್ಲೆಗೆ ಅಮಿತ್ ಶಾ ಎಂಟ್ರಿ ಕೊಡುತ್ತಿದ್ದಾರೆ.
ನಾಯಕರೊಂದಿಗೆ ಶಾ ಸಭೆ: ಈಗಾಗಲೇ ರಾಜ್ಯ ಪ್ರವಾಸದಲ್ಲಿರುವ ಅಮಿತ್ ಶಾ ಇಂದು ಸಂಜೆ 6:15ಕ್ಕೆ ಕಲಬುರಗಿಗೆ ಆಗಮಿಸಲಿದ್ದಾರೆ. ಇವರು ಬಹಿರಂಗ ಪ್ರಚಾರ ನಡೆಸುತ್ತಿಲ್ಲ. ಬದಲಾಗಿ ಸಂಜೆ 7:30 ರಿಂದ 1 ಗಂಟೆಗಳ ಕಾಲ ಖಾಸಗಿ ಹೋಟೆಲ್‌ನಲ್ಲಿ ಬಿಜೆಪಿ ಸ್ಥಳಿಯ ನಾಯಕರೊಂದಿಗೆ ಮಹತ್ವದ ಸಭೆ ನಡೆಸಲಿದ್ದಾರೆ. ಸಭೆ ಬಳಿಕ 8.45ಕ್ಕೆ ವಿಶೇಷ ವಿಮಾನದ ಮೂಲಕ ನವದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.
ಖರ್ಗೆ ತವರು ವಶಕ್ಕೆ ಪಡೆಯಲು ಮಾಡಬೇಕಾದ ಪ್ರಚಾರ, ಕೈಗೊಳ್ಳಬೇಕಾದ ತಂತ್ರಗಳ ಬಗ್ಗೆ ಸ್ಥಳೀಯ ನಾಯಕರಿಗೆ ಸಲಹೆ ಸೂಚನೆಗಳನ್ನು ಅಮಿತ್ ನೀಡಲಿದ್ದಾರೆ. ಪ್ರಮುಖವಾಗಿ ಸವಾಲಾಗಿರುವ ಬಂಡಾಯದ ಬಿಸಿ ಸರಿದೂಗಿಸುವ ಜೊತೆಗೆ ಪ್ರಭಾವಿ ಮುಖಂಡರಗಳನ್ನ ಬಿಜೆಪಿಯತ್ತ ಸೆಳೆಯುವುದು, ರಾಜ್ಯ ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಟಾಸ್ಕ್ ನೀಡುವ ಸಾಧ್ಯತೆ ಇದೆ. ಅಲ್ಲದೇ, ಗೆಲುವಿಗೆ ಪ್ರಚಾರ ಹೇಗಿರಬೇಕು, ಸ್ಥಳೀಯ ನಾಯಕರು ಏನೆಲ್ಲಾ ಮಾಡಬೇಕು ಅನ್ನೋದರ ಬಗ್ಗೆ ನಿರ್ದೇಶನವನ್ನು ಅಮಿತ್ ಶಾ ನೀಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ನಾಳೆ ಮಹಿಳಾ ಸಮಾವೇಶ: ಅಮಿತ್ ಶಾ ಭೇಟಿ ಬೆನ್ನಲ್ಲೇ ನಾಳೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜಿಲ್ಲೆಗೆ ಆಗಮಿಸಲಿದ್ದಾರೆ. ಇಡೀ ದಿನ ಬಿಜೆಪಿ ಪರ ಪ್ರಚಾರ ಕಾರ್ಯ ನಡೆಸಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಪ್ರಬುದ್ಧರೊಂದಿಗೆ ಸಂವಾದ, ಮಧ್ಯಾಹ್ನ 12.45ಕ್ಕೆ ಆಳಂದದಲ್ಲಿ ಮಹಿಳಾ ಸಮಾವೇಶ, ಮಧ್ಯಾಹ್ನ 3 ಗಂಟೆಗೆ ಕಲಬುರಗಿ ನಗರದಲ್ಲಿ ಮಹಿಳಾ ಸಮಾವೇಶ, ಸಂಜೆ 4 ಗಂಟೆಗೆ ಕಲಬುರಗಿ ದಕ್ಷಿಣ ಕ್ಷೇತ್ರದಲ್ಲಿ ಮಹಾ ಸಂಪರ್ಕ ಅಭಿಯಾನದಲ್ಲಿ ಮನೆ-ಮನೆ ಭೇಟಿ ನೀಡಲಿದ್ದಾರೆ.
ಮತ್ತೊಂದೆಡೆ, ಬಿಜೆಪಿಯ ಪ್ರಚಾರದ ರಣ ತಂತ್ರಕ್ಕೆ ಪ್ರತಿಯಾಗಿ ಕಾಂಗ್ರೆಸ್ ಕೂಡ ಪ್ರತಿ ತಂತ್ರ ಹೆಣೆಯುತ್ತಿದೆ. ರಾಹುಲ್ ಗಾಂಧಿ ಅವರನ್ನು ಕರೆ ತಂದು ಮತ ಬೇಟೆಯಾಡುವ ರಣತಂತ್ರ ರೂಪಿಸಿದೆ. ಒಟ್ಟಾರೆ ಎರಡು ಪಕ್ಷಗಳು ಕಲ್ಯಾಣ ಕರ್ನಾಟಕ ಅದರಲ್ಲೂ ಕಲಬುರಗಿ ಜಿಲ್ಲೆಯ 9 ಕ್ಷೇತ್ರಗಳನ್ನು ಪ್ರತಿಷ್ಠೆಯಾಗಿ ಸ್ವಿಕರಿಸಿದ್ದು, ಗೆಲುವಿಗೆ ರಣರೋಚಕ ತಂತ್ರ-ಪ್ರತಿತಂತ್ರ ರೂಪಿಸುತ್ತಿರುವುದು ಕಂಡು ಬರುತ್ತಿದೆ.
ಇದನ್ನೂ ಓದಿ: ಏಪ್ರಿಲ್ 27 ರಂದು 50 ಲಕ್ಷ ಬಿಜೆಪಿ ಕಾರ್ಯಕರ್ತರ ಜೊತೆ ಪ್ರಧಾನಿ ಸಂವಾದ