ಕಲಬುರಗಿ: ಕಲ್ಯಾಣ ಕರ್ನಾಟಕಕ್ಕೆ ಇಂದು ಸುದಿನ. ಹೈದರಾಬಾದ್ ನಿಜಾಮರ ಕಪಿಮುಷ್ಠಿಯಿಂದ ಕಲ್ಯಾಣ ಕರ್ನಾಟಕ ವಿಮೋಚನೆ ಹೊಂದಿದ ದಿನ. ಇಂಥ ಅಭೂತಪೂರ್ವ ಸಂಭ್ರಮದಲ್ಲಿ ನಾಡದೊರೆ ಸಿಎಂ ಬಸವರಾಜ ಬೊಮ್ಮಾಯಿ ಧ್ವಜಾರೋಹಣ ನೆರವೇರಿಸಿದ್ದಾರೆ.
ಸೆಪ್ಟೆಂಬರ್ 17 ಬಂತೆಂದರೆ ಸಾಕು ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಹಬ್ಬದ ಸಂಭ್ರಮ ಮನೆ ಮಾಡುತ್ತದೆ. ಅನೇಕರ ಹೋರಾಟ, ತ್ಯಾಗದ ಫಲವಾಗಿ ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳು ನಿಜಾಮರ ಆಡಳಿತದಿಂದ ಮುಕ್ತಿ ಹೊಂದಿದ ದಿನವಿದು.
ದೇಶಕ್ಕೆ ಆಗಸ್ಟ್ 15, 1947 ರಲ್ಲಿ ಸ್ವಾತಂತ್ರ್ಯ ಸಿಕ್ಕರೂ, ಕಲ್ಯಾಣ ಕರ್ನಾಟಕಕ್ಕೆ ಮುಕ್ತಿ ಸಿಕ್ಕಿದ್ದು 13 ತಿಂಗಳ ನಂತರ. ಅಂದರೆ 1948 ಸೆಪ್ಟೆಂಬರ್ 17 ರಂದು. ಆ ದಿನವನ್ನು ಕಲ್ಯಾಣ ಕರ್ನಾಟಕ ವಿಮೋಚನಾ ದಿನವನ್ನಾಗಿ ಆಚರಿಸಲಾಗುತ್ತದೆ.
ಈ ಹಿಂದೆ ಸೆಪ್ಟೆಂಬರ್ 17ರಂದು ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿತ್ತು. ಆದರೆ, ಬಿಜೆಪಿ ಸರ್ಕಾರವು ಕಲ್ಯಾಣ ಕರ್ನಾಟಕ ಅಂತಾ ಮರು ನಾಮಕರಣ ಮಾಡಿ ಕಲ್ಯಾಣ ಕರ್ನಾಟಕ ಉತ್ಸವ ಅಂತಾ ಆಚರಿಸುತ್ತಿದೆ.
ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ ಏಳು ಜಿಲ್ಲೆಗಳಲ್ಲಿ ಕಲ್ಯಾಣ ಕರ್ನಾಟಕ ಉತ್ಸವದ ಸಂಭ್ರಮ ಕಳೆಗಟ್ಟಿದೆ.
ಧ್ವಜಾರೋಹಣದ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಅವರು ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಕೊರೊನಾ ಮುಕ್ತ ಕರ್ನಾಟಕಕ್ಕೆ ಪಣ ತೊಟ್ಟಿರುವ ಸರ್ಕಾರ ಉತ್ಸವದ ವೇದಿಕೆಯಲ್ಲೇ ವ್ಯಾಕ್ಸಿನ್ ಮೇಳಕ್ಕೆ ಚಾಲನೆ ನೀಡಲಿದ್ದಾರೆ.
ಇದನ್ನೂ ಓದಿ: ಸಿಎಂ ಬೊಮ್ಮಾಯಿ ಕ್ಷೇತ್ರದಲ್ಲೇ ಹಳ್ಳಿ ಸ್ಥಿತಿ ದುರ್ಘಮ.. ದಶಕದಿಂದಲೂ ಮೂಲ ಸೌಕರ್ಯ ಗಗನಕುಸುಮ
ಹೈದರಾಬಾದ್ ಕರ್ನಾಟಕಕ್ಕೆ ಕಲ್ಯಾಣ ಕರ್ನಾಟಕ ಎಂದು ಮರು ನಾಮಕರಣ ಮಾಡಿದ್ರೂ, ನಿರೀಕ್ಷಿಸಿದಷ್ಟು ಈ ಭಾಗದ ಅಭಿವೃದ್ಧಿಯಾಗದೇ ಇರೋದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.