ಕಲಬುರಗಿ: ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದು ಸೇರಿದಂತೆ ಈ ಭಾಗದ ಹಲವು ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಕಲಬುರಗಿ ಜಿಲ್ಲೆಯ ಬಿಜೆಪಿ ಮುಖಂಡರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಇಂದು ಮನವಿ ಸಲ್ಲಿಸಿದ್ದಾರೆ.
ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಖಾಯಂ ಕಾರ್ಯದರ್ಶಿ ನೇಮಕ, 371ಜೆ ವಿಧೇಯಕ ಅನ್ವಯ ಎ ಮತ್ತು ಬಿ ವೃಂದದ ನೇಮಕಾತಿಯಲ್ಲಿ ಶೇಕಡ 75, ಸಿ ವೃಂದದಲ್ಲಿ ಶೇ.80, ಡಿ ಗ್ರೂಪ್ನಲ್ಲಿ ಶೇ.85 ಹಾಗೂ ರಾಜ್ಯದ ಇತರೆ ಭಾಗದ ನೇಮಕಾತಿಯಲ್ಲಿ ಶೇ.8 ರಷ್ಟು ಮೀಸಲಾತಿ ಕಲ್ಪಿಸಬೇಕು. ಇನ್ನು, ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆಸಿ,ಈ ಭಾಗದ ಸಮಸ್ಯೆಗಳಿಗೆ ಸ್ಪಂದಿಸುವಂತೆ ಒತ್ತಾಯಿಸಿದರು.
ಈ ವೇಳೆ ಸಂಸದ ಬಿಜೆಪಿ ಉಮೇಶ್ ಜಾಧವ್, ಮಾಜಿ ಎಂಎಲ್ಸಿ ಅಮರನಾಥ್ ಪಾಟೀಲ್, ಬಿಜೆಪಿ ಮುಖಂಡ ನಾಮದೇವ್ ರಾಥೋಡ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.