ಕಲಬುರಗಿ: ಭೀಮಾ ನದಿ ಪ್ರವಾಹದಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡ ಪಿಎಸ್ಐ ಒಬ್ಬರು ನಕಲಿ ರಕ್ಷಣಾ ಕಾರ್ಯ ಮಾಡಿರುವ ವಿಡಿಯೋ ವೈರಲ್ ಆಗಿದೆ.
ಜೇವರ್ಗಿ ತಾಲೂಕಿನ ನೇಲೊಗಿ ಠಾಣೆಯ ಪಿಎಸ್ಐ ಎಂ.ಎಸ್.ಯಲಗೋಡ ಭೀಮಾ ಪ್ರವಾಹದಲ್ಲಿ ಮುಳುಗಿದ ಜನರನ್ನು ರಕ್ಷಣೆ ಮಾಡುವ ಬದಲಾಗಿ ರಕ್ಷಣೆ ಮಾಡಿದಂತೆ ಪೋಸ್ ಕೊಟ್ಟಿದ್ದಾರೆ. ಈ ಕುರಿತ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ವಿಡಿಯೋದಲ್ಲೇನಿದೆ?
ಸೊಂಟಮಟ್ಟದ ನೀರಿನಲ್ಲಿ ನಾಲ್ವರು ಯುವಕರ ಸಹಾಯದಿಂದ ಥರ್ಮಾಕೋಲ್ ಮೇಲೆ ನಿಂತಿರುವ ಪಿಎಸ್‌ಐ ಮೈಗೆ ನೀರು ತಗುಲದಂತೆ ಪೋಸ್ ಕೊಟ್ಟಿದ್ದಾರೆ. ಬಳಿಕ ಪ್ರವಾಹದಲ್ಲಿ ಮುಳುಗಿದ ಮನೆಯತ್ತ ತೆರಳುವ ಈ ಅಧಿಕಾರಿ, ಮಾರ್ಗಮಧ್ಯೆ ಒಂದು ಕುರಿಮರಿ ಇದ್ರೆ ತರಿಸಿಕೊಡಿ. ಅದನ್ನೇ ರಕ್ಷಣೆ ಮಾಡಿದಂತೆ ಮಾಡೋಣ. ಬಳಿಕ ಟಿವಿ, ಸಾಮಾಜಿಕ ಜಾಲತಾಣದಲ್ಲಿ ಬಿಡೋಣ ಎಂದು ಜನರಿಗೆ ತಿಳಿಸಿದ್ದಾರೆ.
ಇದಕ್ಕೆ ಗ್ರಾಮಸ್ಥರು ಸಾಥ್ ಕೊಟ್ಟಿದ್ದು, ಬೇರೆಡೆಯಿಂದ ಎರಡು ಕುರಿಮರಿ ತಂದು ಪಿಎಸ್ಐ ಸಾಹೇಬ್ರೆ ನೀರಿನಲ್ಲಿ ಮುಳುಗಿ ರಕ್ಷಣೆ ಮಾಡಿದ್ದಾರೆ ಎಂಬಂತೆ ಬಿಂಬಿಸಿ ವಿಡಿಯೋ ಮಾಡಿದ್ದಾರೆ.
'ಸಿಂಗಂ' ಎನ್ನಿಸಿಕೊಳ್ಳುವ ಭರಾಟೆಯಲ್ಲಿ ನಕಲಿ ರಕ್ಷಣಾ ಕಾರ್ಯಾಚರಣೆ ಮಾಡಿದ ನೇಲೊಗಿಯ ಪೊಲೀಸ್ ಅಧಿಕಾರಿ ಎಮ್.ಎಸ್.ಯಲಗೋಡ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಈ ಹಿಂದೆ ಕೊರೊನಾ ಸಂದರ್ಭದಲ್ಲಿಯೂ ಕೂಡ ನೂರಾರು ಹಿಂಬಾಲಕರಿಂದ ಹಾಲಿನಲ್ಲಿ ಅಭಿಷೇಕ ಮಾಡಿಸಿಕೊಂಡು ಇಲಾಖೆಯ ಕೆಂಗಣ್ಣಿಗೆ ಇವರು ಗುರಿಯಾಗಿದ್ದರು.