ಕಲಬುರಗಿ: ಮರಳು ಅನಲೋಡ್ ಮಾಡುವಾಗ ಟಿಪ್ಪರ್ ಪಲ್ಟಿಯಾದ ಪರಿಣಾಮ ಬಾಲಕ ಸೇರಿ ಇಬ್ಬರ ಸಾವನ್ನಪ್ಪಿರುವ ಘಟನೆ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ಕಲಕಂಬ್ ಬಡಾವಣೆಯಲ್ಲಿ ಬುಧವಾರ ರಾತ್ರಿ ನಡೆದಿದೆ. ಮುಕಂದ್ (12) ಹಾಗೂ ಮಹಮ್ಮದ್ ಸಲೀಂ(66) ಸಾವಿಗೀಡಾದ ದುರ್ದೈವಿಗಳು. ನಿರ್ಮಾಣ ಹಂತದಲ್ಲಿರುವ ಮನೆಗೆ ಮರಳು ತಂದಿದ್ದ ಟಿಪ್ಪರ್ ಅನ್‌ಲೋಡ್ ಮಾಡುವಾಗ ಪಕ್ಕದ ಚರಂಡಿಯಲ್ಲಿ ಪಲ್ಟಿಯಾಗಿದೆ. ಈ ವೇಳೆ ಅಲ್ಲೆ ನಿಂತಿದ್ದ ಬಾಲಕ ಹಾಗೂ ವ್ಯಕ್ತಿ ಟಿಪ್ಪರ್ ನಡಿ ಸಿಲುಕಿ ಸಾವನ್ನಪ್ಪಿದ್ದಾರೆ.
ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತರ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದ್ದು, ಘಟನೆ ಸಂಬಂಧ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿದ್ರೆಗಣ್ಣಿನಲ್ಲಿ ಆಯಾ ತಪ್ಪಿ ಬಾವಿಗೆ ಬಿದ್ದ ಅಜ್ಜಿ: ಇನ್ನು ಜಿಲ್ಲೆಯ ಚಿಂಚೋಳಿ ತಾಲೂಕಿನ ಚಿಮ್ಮಾಈದ್ಲಾಯಿ ಗ್ರಾಮದಲ್ಲಿ ವಯೋ ವೃದ್ದೆಯೊಬ್ಬರು ಆಯಾತಪ್ಪಿ ಬಾವಿಯಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ಕಮಲಾಬಾಯಿ ಕಲಬುರಗಿ (80) ಮೃತ ಅಜ್ಜಿ, ಬುದವಾರ ನಸುಕಿನ ಜಾವ ಹಾಸಿಗೆಯಿಂದ ಎದ್ದಿದ್ದ ಅಜ್ಜಿ ಪಕ್ಕದಲ್ಲಿ ಕಟ್ಟೆ ಎಂದು ಭಾವಿಸಿ ಕುಳಿತುಕೊಳ್ಳಲು ಹೋದಾಗ ತೆರೆದ ಬಾವಿಗೆ ಬಿದ್ದು ಸಾವನ್ನಪ್ಪಿದ್ದಾರೆಂದು ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನು ಓದಿ: ಆಂಧ್ರಪ್ರದೇಶದಲ್ಲಿ 7 ಕಾರ್ಮಿಕರು ಸಾವು.. ಹಿಮಾಚಲದಲ್ಲಿ ನಾಲ್ವರು ಮಕ್ಕಳು ಸಜೀವ ದಹನ
ಸಿನಿಮಿಯ ರೀತಿಯಲ್ಲಿ ಕೊಲೆ - ಆರೋಪಿಗೆ ಜೀವಾವಧಿ ಶಿಕ್ಷೆ: ವಿದೇಶಕ್ಕೆ ಹೋಗಲು ಸಾಲ ಕೊಡಲಿಲ್ಲ ಎಂಬ ಕಾರಣಕ್ಕೆ ಹಗೆತನ ಸಾಧಿಸಿ ಬುಲೇರೋ ವಾಹನದಿಂದ ಬೈಕ್‌ಗೆ ಡಿಕ್ಕಿ ಹೊಡೆಸಿ ಸಿನಿಮಿಯ ರೀತಿಯಲ್ಲಿ ಕೊಲೆ ಮಾಡಿದ ಆರೋಪಿಗೆ ಜೀವಾವಧಿ ಶಿಕ್ಷೆ ಜೊತೆ 15 ಸಾವಿರ ರೂ ದಂಡ ವಿಧಿಸಿ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೇಷನ್ಸ್ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ನಗರದ ಇಸ್ಲಾಮಾಬಾದ್ ಕಾಲೋನಿ ನಿವಾಸಿ ಮಕ್ಬುಲ್ ಹಮೀದ್ (53) ಶಿಕ್ಷೆಗೆ ಗುರಿಯಾದ ಆಪಾದಿತ. ವಿದೇಶಕ್ಕೆ ಹೊಗಲು ಅಬ್ದುಲ್ ರಹಿಂ ಎಂಬುವರಿಗೆ ಮಕ್ಬುಲ್ ಸಾಲ ಕೇಳಿದ್ದ. ಆದರೆ, ಹಣ ಇಲ್ಲ ಎಂದು ಅಬ್ದುಲ್ ಹೇಳಿದ್ದರು. ಇದರಿಂದ ಕೋಪಗೊಂಡ ಮಕ್ಬುಲ್, 2020ರ ಮೇ 15 ರಂದು ಹುಮನಾಬಾದ್ ರಿಂಗ್ ರಸ್ತೆಯಿಂದ ಹಾಗರಗಾ ಕ್ರಾಸ್ ಮಾರ್ಗದಲ್ಲಿ ಅಬ್ದುಲ್ ರಹಿಮ್ ತಮ್ಮ ಬೈಕ್ ಮೇಲೆ ಹೋಗುವಾಗ ಹಿಂದಿನಿಂದ ಬುಲೇರೋ ವಾಹನದಲ್ಲಿ ವೇಗವಾಗಿ ಬಂದು ಡಿಕ್ಕಿ ಹೊಡೆದು, ವಾಹನ ಸಮೇತ ಪರಾರಿಯಾಗಿದ್ದ. ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಅಬ್ದುಲ್ ರಹಿಂ ಮೃತಪಟ್ಟಿದ್ದರು.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ರೋಜಾ ಠಾಣೆಯ ಇನ್ಸ್ಪೆಕ್ಟರ್ ಅಸ್ಲಂ ಭಾಷಾ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಚಂದ್ರಶೇಖರ ಕರೋಶಿ ಅವರು, ಆರೋಪಿಗೆ ಶಿಕ್ಷೆ ಪ್ರಕಟಿಸಿದ್ದಾರೆ.
ಇದನ್ನೂ ಓದಿ: ಆನೇಕಲ್: ಕಬಡ್ಡಿ ರೈಡ್ ವೇಳೆ ಹೃದಯಾಘಾತ, ವಿದ್ಯಾರ್ಥಿನಿ ಸಾವು