ಕಲಬುರಗಿ: ಬಿಸಿಲುನಾಡು ಕಲಬುರಗಿ ಜಿಲ್ಲೆ ಇದೀಗ ಅಕ್ಷರಶ ಮಲೆನಾಡಿನ ಅನುಭವ ನೀಡುತ್ತಿದೆ. ಸೂರ್ಯ ಕಾಣದಂತೆ ಆವರಿಸಿರುವ ಮೋಡಗಳು, ನಿರಂತರವಾಗಿ ಸುರಿಯುತ್ತಿರುವ ಮಳೆ ಹನಿಗಳು, ಎಲ್ಲಡೆ ಹಸಿರು ವಾತಾವರಣ ಕಂಡು ಬರುತ್ತಿದೆ.
ಚಿಂಚೋಳಿ ಫಾರೆಸ್ಟ್ ಹಸಿರು ಸೀರೆಯುಟ್ಟ ನೀರೆಯಂತೆ ಕಂಗೊಳಿಸುತ್ತಿದೆ. ಪ್ರಕೃತಿ ಸೌಂದರ್ಯ ಕಣ್ತುಂಬಿಕೊಳ್ಳಲು ಜನರ ದಂಡೇ ಹರಿದು ಬರುತ್ತಿದೆ. ರಾಜ್ಯದಲ್ಲಿ ಅತೀ ಹೆಚ್ಚಿನ ಬಿಸಿಲು ದಾಖಲಾಗುವ ಜಿಲ್ಲೆ ಎಂಬ ಖ್ಯಾತಿ ಕಲಬುರಗಿ ಜಿಲ್ಲೆಗೆ ಇದೆ. ಆದರೆ ಕಳೆದ ಮೂರು ವರ್ಷಗಳಿಂದ ಮಳೆಗಾಲದಲ್ಲಿ ಮಲೆನಾಡಿನಂತೆ ಕಂಗೊಳಿಸಲು ಆರಂಭಿಸಿದೆ. ಜಿಲ್ಲೆಯಲ್ಲಿ ಮೂರು ವರ್ಷಗಳಿಂದ ಉತ್ತಮ ಮಳೆಯಾಗಿದೆ. ಅದರಲ್ಲೂ ಈ ವರ್ಷ ಜುಲೈ ಮೊದಲ ವಾರದಿಂದ ಜಿಲ್ಲೆಯ ವಾತಾವರಣವೇ ಬದಲಾಗಿ ಹೋಗಿದೆ.
ಮೋಡ ಕವಿದ ವಾತಾವರಣ ಮತ್ತೊಂದೆಡೆ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆ. ಬಿಸಿಲುನಾಡಿನ ಜನರಿಗೆ ವಿಶಿಷ್ಟ ಅನುಭವ ನೀಡುತ್ತಿದೆ. ಚಿಂಚೋಳಿ ತಾಲೂಕಿನಲ್ಲಿ ಈಗ ಮಲೆನಾಡು ಸೃಷ್ಟಿಯಾಗಿದೆ. ಮಳೆಗಾಲದಲ್ಲಿ ಮಳೆಯ ಮಜಾ ಸವಿಯಲು ಮಲೆನಾಡಿಗೆ ಹೋಗುತ್ತಿದ್ದ ಈ ಭಾಗದ ಜನರು ಈಗ ಚಿಂಚೋಳಿಯತ್ತ ಮುಖ ಮಾಡುತ್ತಿದ್ದಾರೆ.
ಚಿಂಚೋಳಿಯ ಕುಂಚಾವರಂ ಅರಣ್ಯ ಪ್ರದೇಶ, ಕಾಡು ಪ್ರಾಣಿಗಳ ಕಲರವ, ಎತ್ತಿಪೊತ್ತಾ ಜಲಪಾತ ಉಕ್ಕಿ ಧುಮುಕುತ್ತಿರುವ ನೀರು, ಮೈದುಂಬಿ ನಿಂತಿರುವ ಚಂದ್ರಪಳ್ಳಿ ಡ್ಯಾಂ, ಹಸಿರು ಹೊತ್ತ ಕಾಡು ಪ್ರದೇಶ ನೋಡುವುದೇ ಕಣ್ಣಿಗೆ ಹಬ್ಬವಾಗಿದೆ. ಚಿಂಚೋಳಿಯ ಕುಂಚಾವರಂ ಅರಣ್ಯ ಪ್ರದೇಶ ಬರೊಬ್ಬರಿ 14,958 ಹೆಕ್ಟೇರ್ ಪ್ರದೇಶದ ವ್ಯಾಪ್ತಿಯಲ್ಲಿದೆ. ಇದನ್ನು 2011ರಲ್ಲಿ ಸಂರಕ್ಷಿತ ವನ್ಯಜೀವಿಧಾಮ ಎಂದು ಘೋಷಿಸಲಾಗಿದೆ. ಬೇಸಿಗೆಯಲ್ಲಿ ಬೋಳಾಗಿ ಕಾಣುವ ಕುಂಚಾವರಂ ಅರಣ್ಯ, ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಸಮುದ್ರದಲ್ಲಿನ ಚಿಪ್ಪು ಅರಳಿದಂತೆ ಹಸಿರ ಸಿರಿಯನ್ನು ಹೊತ್ತು ಅರಳಿದೆ.
ಇನ್ನು ಈ ಬಗ್ಗೆ ಇಲ್ಲಿನ ಪ್ರವಾಸಿಗರು ಸಂತಸ ವ್ಯಕ್ತಪಡಿಸುತ್ತಾರೆ. ಚಿಂಚೋಳಿ ತಾಲೂಕಿನ ಕುಂಚಾವರಂ, ಚಂದ್ರಪಳ್ಳಿ ಡ್ಯಾಂ ಹಾಗೂ ಇನ್ನಿತರ ಪ್ರದೇಶಗಳು ಮಲೆನಾಡಿಗಿಂತ ಕಡಿಮೇನೂ ಇಲ್ಲ. ಮಡಿಕೇರಿಗಿಂತ ಹೆಚ್ಚಿನ ಆನಂದ, ರಮಣೀಯ ದೃಶ್ಯಗಳು ಹಾಗೂ ಜಲಪಾತಗಳು ನಮ್ಮೂರಲ್ಲೇ ಇರುವುದು ನಮಗೆ ಹೆಮ್ಮೆಯ ವಿಷಯ ಎಂದು ಸ್ಥಳೀಯ ಪ್ರವಾಸಿ ಅಂಬಿಕಾ ಪಾಟೀಲ್ ಹೇಳುತ್ತಾರೆ.
ಇನ್ನು ಕುಂಚಾವರಂ ಅರಣ್ಯ ಪ್ರದೇಶದ ಪ್ರಾಣಿಗಳ ಕಲರವ, ಹಸಿರು ವಾತಾವರಣ, ಎತ್ತಿಪೊತ್ತಾ ಜಲಪಾತ, ಗೊಟಂಗೊಟ್ಟಾ ಪ್ರದೇಶ ನೋಡುವುದೇ ಒಂದು ಆಲ್ಹಾದಕರ ಸಂಗತಿ. ಆದರೆ ಇಲ್ಲಿನ ರಸ್ತೆಗಳು ಸರಿಯಿಲ್ಲ. ಮಳೆಗಾಲದ ದಿನಗಳಲ್ಲಿ ರಸ್ತೆಯ ತಗ್ಗು ಪ್ರದೇಶದಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅನಾನುಕೂಲ ಆಗುತ್ತಿದೆ. ಸರ್ಕಾರ ಈ ಬಗ್ಗೆ ಗಮನ ಹರಿಸಿ ಇದನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸಬೇಕು ಅನ್ನೋದು ಪ್ರವಾಸಿಗ ಹಾಗೂ ಹೋರಾಟಗಾರ ಲಿಂಗರಾಜ ಸಿರಗಾಪೂರ ಆಗ್ರಹಿಸುತ್ತಾರೆ.