ಕಲಬುರಗಿ : ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ಹಸುಗೂಸಿನೊಂದಿಗೆ ಕಳೆದ ಮೂರು ದಿನಗಳಿಂದ ನಗರದ ಬಸ್ ನಿಲ್ದಾಣದಲ್ಲಿ ಪರದಾಡುತ್ತಿದ್ದ ಮಹಿಳೆಯ ನೆರವಿಗೆ ಆಟೋ ಚಾಲಕರು ಬಂದಿದ್ದಾರೆ.
ಮಹಿಳೆಯ ಕಷ್ಟಕ್ಕೆ ಸ್ಪಂದಿಸಿದ ಆಟೋ ಚಾಲಕರು :
ಸ್ವಾತಿ ಎಂಬ ಮಹಿಳೆ ಹಸುಗೂಸು ಮತ್ತು ಮತ್ತೊಂದು ಮಗುವಿನೊಂದಿಗೆ ಮಹಾರಾಷ್ಟ್ರದ ಲಾತೂರ್ನಿಂದ ಬೆಂಗಳೂರಿಗೆ ತೆರಳಲು ಕಲಬುರಗಿಗೆ ಬಂದಿದ್ದರು. ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ಬೆಂಗಳೂರಿಗೆ ತೆರಳಲಾಗದೆ ಬಸ್ ನಿಲ್ದಾಣದಲ್ಲಿಯೇ ಪರದಾಡುತ್ತಿದ್ದರು. ಮಹಿಳೆಯ ಕೈಯಲ್ಲಿ ಹಣ ಇಲ್ಲದಿದ್ದರಿಂದ ಆಹಾರ ಸಿಗದೆ ಕಂಗಾಲಾಗಿದ್ದರು. ಈಕೆಯ ಸಂಕಷ್ಟ ಕಂಡು ನೆರವಿಗೆ ಬಂದ ನಗರದ ಆಟೋ ಚಾಲಕರು, ಹಣ ಹೊಂದಿಸಿ ಖಾಸಗಿ ಬಸ್ ಮೂಲಕ ಬೆಂಗಳೂರಿಗೆ ಕಳಿಸಿಕೊಡುವ ವ್ಯವಸ್ಥೆ ಮಾಡಿದ್ದಾರೆ.
ಇದನ್ನೂಓದಿ : ಸಾರಿಗೆ ನೌಕರರ ಮುಷ್ಕರ: ಖಾಸಗಿ ವಾಹನ ಚಾಲಕರಿಂದ ದುಪ್ಪಟ್ಟು ಹಣ ವಸೂಲಿ
ಬಸ್ ಸಂಚಾರ ಸ್ಥಗಿತಗೊಂಡಿದ್ದನ್ನೇ ಲಾಭ ಮಾಡಿಕೊಂಡ ಕೆಲ ಆಟೋ ಚಾಲಕರು, ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಈ ನಡುವೆ ಮಹಿಳೆಯ ಕಷ್ಟಕ್ಕೆ ಸ್ಪಂದಿಸುವ ಮೂಲಕ ಆಟೋ ಚಾಲಕರು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.