ಕಲಬುರಗಿ: ಮಹಾಮಾರಿ ಕೊರೊನಾ ಸೋಂಕು ಹಾಗೂ ಸಾವಿನಿಂದಾಗಿ ಆತಂಕದ ವಾತಾವರಣವಿರುವ ಕಲಬುರಗಿಯಲ್ಲಿ ನಿತ್ಯ ಕಸ ವಿಂಗಡಿಸಿ ವಿಲೇವಾರಿ ಮಾಡುವ ಪೌರ ಕಾರ್ಮಿಕರ ಪಾಡು ಹೇಳತೀರದಾಗಿದೆ.
ಪ್ರತಿ ನಿತ್ಯ ಬೆಳಗ್ಗೆಯೇ ಪೊರಕೆ ಹಿಡಿದು ಕೆಲಸಕ್ಕೆ ಬರುವ ಇವರಿಗೆ ಸರಿಯಾದ ಮಾಸ್ಕ್, ಸ್ಯಾನಿಟೈಸರ್, ಶುದ್ಧ ಕುಡಿಯುವ ನೀರು ಮರೀಚಿಕೆ. ನಿತ್ಯ ಇವರ ಗೋಳನ್ನು ಬಲು ಹತ್ತಿರದಿಂದ ನೋಡುತ್ತಿದ್ದ ಶಹಾಬಜಾರ್ ಬಡಾವಣೆಯ ಬಾಲಕಿ ಅದಿತಿ ಭೂಸನೂರ್ ತನ್ನ 11 ನೇ ವರ್ಷದ ಹುಟ್ಟುಹಬ್ಬವನ್ನು ಪೌರಕಾರ್ಮಿಕರೊಂದಿಗೆ ಆಚರಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಅದಿತಿ ಭೂಸನೂರ್ 50ಕ್ಕೂ ಹೆಚ್ಚು ಪೌರ ಕಾರ್ಮಿಕರಿಗೆ ಮಾಸ್ಕ್, ಸ್ಯಾನಿಟೈಸರ್ ನೀಡಿದ್ದಲ್ಲದೆ, ಆಹಾರದ ಕಿಟ್ ವಿತರಿಸಿ ತನ್ನ ಹುಟ್ಟು ಹಬ್ಬವನ್ನು ವಿಷೇಶವಾಗಿ ಆಚರಿಸಿಕೊಂಡಿದ್ದಾರೆ. ಶಹಾಬಜಾರ್ ಬಡಾವಣೆಯ ನೈರ್ಮಲ್ಯ ನಿರೀಕ್ಷಕರ ಕಚೇರಿಯ ಅಂಗಳದಲ್ಲಿ ಸೋಮವಾರ ಕೊರೊನಾ ನಿಯಮನಗಳನ್ನು ಪಾಲಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಎಲ್ಲರ ಯೋಗಕ್ಷೇಮ ವಿಚಾರಿಸಿ ಆದರ್ಶ ಮೆರೆದಿದ್ದಾಳೆ.
ಈ ಬಗ್ಗೆ ಮಾತನಾಡಿದ ಅದಿತಿ ಪ್ರತಿ ವರ್ಷ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದೆ. ಕೊರೊನಾ ಮಹಾಮಾರಿಯಿಂದಾಗಿ ಜನರೆಲ್ಲ ತೊಂದರೆಯಲ್ಲಿರುವುದನ್ನು ನಾನು ಕಣ್ಣಾರೆ ನೋಡುತ್ತಿರುವೆ. ಹೀಗಾಗಿ ಈ ಬಾರಿ ಸಂದಿಗ್ಧ ಪರಿಸ್ಥಿತಿಯಲ್ಲಿ ಕಾಯಕದಲ್ಲಿ ತೊಡಗಿರುವ ಪೌರಕಾರ್ಮಿಕರೊಂದಿಗೆ ಸರಳವಾಗಿ ನನ್ನ ಹುಟ್ಟು ಹಬ್ಬ ಆಚರಿಸಿಕೊಂಡಿರುವೆ ಎಂದು ಹೇಳಿದರು.
ಮಗಳು ಅದಿತಿ ಸ್ವಯಂ ಪ್ರೇರಿತಳಾಗಿ ಈ ಬಾರಿಯ ಹುಟ್ಟುಹಬ್ಬ ಆಚರಿಸಿಕೊಳ್ಳದೆ ಅದೇ ಹಣವನ್ನ ಪೌರ ಕಾರ್ಮಿಕರಿಗೆ ಊಟೋಪಚಾರ, ಕೊರೊನಾ ಸುರಕ್ಷತೆಗಾಗಿ ಬಳಸೋಣ ಎಂದು ಹೇಳಿದಾಗ ಸಂತೋಷ ಪಟ್ಟೆವು. ಹುಟ್ಟು ಹಬ್ಬಕ್ಕೆ ವೆಚ್ಚ ಮಾಡುವ ಹಣಕ್ಕಿಂತ ಹೆಚ್ಚು ನಾವು ಅವಳ ಈ ಸಮಾಜಮುಖಿ ಚಿಂತನೆಗೆ ಬೆಂಬಲಿಸಿದ್ಧೇವೆ ಎಂದು ಅದಿತಿಯ ತಂದೆ-ತಾಯಿ ಹಣಮಂತ ಭೂಸನೂರ್ ಹಾಗೂ ದೀಪಾಲಿ ಭೂಸನೂರ್ ಮಗಳ ಕಾರ್ಯವನ್ನು ಶ್ಲಾಘಿಸಿದ್ದಾರೆ.
ಓದಿ: ಬೇಡಿಕೆ ಈಡೇರಿಸದಿದ್ದರೆ ಮುಂದಿನ ಶೈಕ್ಷಣಿಕ ವರ್ಷ ಪುನಾರಂಭವಾಗುವುದಿಲ್ಲ: ಕ್ಯಾಮ್ಸ್ ಎಚ್ಚರಿಕೆ