ಕಲಬುರಗಿ: ಛತ್ತೀಸ್ಗಢದ ನಕ್ಸಲ್ ಕಾರ್ಯಾಚರಣೆ ವೇಳೆ ಹುತಾತ್ಮರಾದ ಯೋಧ ಮಹಾದೇವಪ್ಪ ಪೊಲೀಸ್ ಪಾಟೀಲ್ ಅವರ ಅಂತಿಮ ಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಸ್ವಗ್ರಾಮ ಜಿಲ್ಲೆಯ ಕಮಲಾಪುರ ತಾಲೂಕಿನ ಮರಗುತ್ತಿಯಲ್ಲಿ ನೆರವೇರಿತು.
ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಹೈದರಾಬಾದ್ ಮಾರ್ಗವಾಗಿ ಮರಗುತ್ತಿ ಗ್ರಾಮಕ್ಕೆ ಮಹಾದೇವ ಅವರ ಪಾರ್ಥಿವ ಶರೀರ ಆಗಮಿಸಿತು. ನಂತರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿತ್ತು. ಸಂಸದ ಡಾ.ಉಮೇಶ ಜಾಧವ, ಸಚಿವ ಪ್ರಿಯಾಂಕ್ ಖರ್ಗೆ, ಜಿಲ್ಲಾಧಿಕಾರಿ ವೆಂಕಟೇಶ ಕುಮಾರ್ ಸೇರಿದಂತೆ ಅನೇಕ ಗಣ್ಯರು, ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಸಾರ್ವಜನಿಕರು ಅಂತಿಮ ದರ್ಶನ ಪಡೆದರು.
ಸಚಿವರು ಸರ್ಕಾರದ ಪರವಾಗಿ ಶೃದ್ಧಾಂಜಲಿ ಸಲ್ಲಿಸಿದರು. ಬಳಿಕ ಪೊಲೀಸರು ಮೂರು ಸುತ್ತಿನ ಗುಂಡು ಹಾರಿಸಿ ಸರ್ಕಾರಿ ಗೌರವ ಸಲ್ಲಿಸಿದರು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಗಿಲು ಮುಟ್ಟಿತ್ತು. ಸಾಯಂಕಾಲ 6 ಗಂಟೆ ಸುಮಾರಿಗೆ ಅಂತಿಕ್ರಿಯೆ ನೆರವೇರಿಸಲಾಯಿತು.
ನಿನ್ನೆ ಛತ್ತೀಸ್ಗಢ ಬಿಜಾಪುರ ಜಿಲ್ಲೆಯಲ್ಲಿ ನಡೆದ ನಕ್ಸಲ್ ಕಾರ್ಯಾಚರಣೆಯಲ್ಲಿ ಸಬ್ ಇನ್ಸಪೆಕ್ಟರ್ ಆಗಿದ್ದ ಮಹಾದೇವ ಅವರು ಹುತಾತ್ಮರಾಗಿದ್ದರು.