ಕಲಬುರಗಿ: ಕೆಐಎಡಿಬಿ ಅಧಿಕಾರಿಗಳು ಆಡಿದ್ದೇ ಆಟ ಅನ್ನೋ ಹಾಗಾಗಿದೆ. ಇಂಡಸ್ಟ್ರಿಗಳ ಬೆಳವಣಿಗೆಗೆ ಕೆಲಸ ಮಾಡ್ತಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದ್ರೆ ಇಲಾಖೆಗೆ ನಷ್ಟ ಉಂಟು ಮಾಡುತ್ತಾ ಮೋಸ ಮಾಡ್ತಿರೋದಂತೂ ಪಕ್ಕಾ. ಅಷ್ಟೇ ಯಾಕೆ ಇಲಾಖೆಯ ಕ್ವಾಟರ್ಸ್ಗಳನ್ನ ಅನಧಿಕೃತವಾಗಿ ಬಾಡಿಗೆಗೆ ಕೊಟ್ಟು ಬಾಡಿಗೆ ಹಣ ಪೀಕುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಹೌದು, ಕಲಬುರಗಿಯ ಕೆಐಎಡಿಬಿ ಅಧಿಕಾರಿಗಳಿಗೆ ಹೇಳೋರಿಲ್ಲ ಕೇಳೋರಿಲ್ಲ, ಅವರು ಆಡಿದ್ದೇ ಆಟ ಅನ್ನೋ ಹಾಗಾಗಿದೆ. ಕಲಬುರಗಿ- ಹುಮನಾಬಾದ್ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಕಪನೂರ್ ಬಳಿ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (KIADB) ಕಚೇರಿ ಇದೆ. ಕಚೇರಿ ಪಕ್ಕದಲ್ಲೇ ನಾಲ್ಕು ಕ್ವಾಟ್ರಸ್ಗಳಿವೆ. ಕಚೇರಿಯ ಖಾಯಂ ಅಧಿಕಾರಿ, ಸಿಬ್ಬಂದಿಗಳ ವಾಸಕ್ಕಾಗಿ ಈ ಕ್ವಾಟ್ರಸ್ಗಳನ್ನ ನಿರ್ಮಿಸಲಾಗಿದೆ. ಆದ್ರೆ ನಿಯಮಗಳನ್ನ ಗಾಳಿಗೆ ತೂರಿ ಅನಧಿಕೃತರಿಗೆ ಈ ಕ್ವಾಟ್ರಸ್ಗಳನ್ನ ಬಾಡಿಗೆಗೆ ಕೊಟ್ಟು ಬಾಡಿಗೆ ನುಂಗುತ್ತಿದ್ದಾರೆ ಎಂದು ಸ್ಥಳೀಯ ಹೋರಾಟಗಾರರು ಆರೋಪಿಸಿದ್ದಾರೆ.
ರಾಜಸ್ಥಾನ ಮೂಲದ ಪಾನಿಪುರಿ ವ್ಯಾಪಾರಿ ಒಬ್ಬರಿಗೆ ಸಾವಿರಾರು ರೂಪಾಯಿಗೆ ಬಾಡಿಗೆ ಕೊಟ್ಟಿದ್ದಾರೆ. ಅವರು ಕಳೆದ 12 ವರ್ಷಗಳಿಂದ ಇದೇ ಕ್ವಾಟ್ರಸ್ನಲ್ಲಿ ಪಾನಿಪುರ ಬ್ಯುಸಿನೆಸ್ ಮಾಡಿಕೊಂಡು ವಾಸ ಮಾಡ್ತಿದ್ದಾರೆ. ಇಲಾಖೆ ಖಾಯಂ ಸಿಬ್ಬಂದಿಗಳಿಗೆ ಕ್ವಾಟ್ರಸ್ಗಳನ್ನ ಕೊಡದೇ ಅನ್ಯಾಯ ಮಾಡಿರುವ ಅಧಿಕಾರಿಗಳು, ಗುತ್ತಿಗೆ ನೌಕರರಿಗೆ ಕ್ವಾಟ್ರಸ್ಗಳನ್ನ ಕೊಟ್ಟಿದ್ದಾರೆ.
ಇನ್ನು ಕೆಐಎಡಿಬಿ ಅಭಿವೃದ್ಧಿ ಇಲಾಖೆಯ ಅಧಿಕಾರಿ, ಟಿ.ಹೆಚ್. ಪ್ರಕಾಶ್ ಅವರಂತೂ ಕಚೇರಿಗೆ ಬರೋದೆ ಇಲ್ವಂತೆ. ಬೆಂಗಳೂರಿನಲ್ಲಿ ವಾಸಿಸುವ ಇವರು ತಿಂಗಳಿಗೊಮ್ಮೆ ಕಲಬುರಗಿಗೆ ಬಂದು ಫೈಲ್ಗಳಿಗೆ ಸಹಿ ಹಾಕಿ ಹೋಗ್ತಾರಂತೆ. ಯಾರೇ ಫೋನ್ ಮಾಡಿದ್ರೂ ರೆಸ್ಪಾನ್ಸ್ ಮಾಡಲ್ಲ. ಇಂತಹ ಅಧಿಕಾರಿಗಳಿಂದ ಹಿಂದುಳಿದ ಪ್ರದೇಶ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಆಗೋದಾದರೂ ಹೇಗೆ?. ಕೆಐಎಡಿಬಿ ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವಂತೆ ಸಾಮಾಜಿಕ ಹೋರಾಟಗಾರರು ಒತ್ತಾಯ ಮಾಡ್ತಿದ್ದಾರೆ.
ಆದಾಯಕ್ಕೆ ಖೋತಾ:
ಕೆಐಎಡಿಬಿಗೆ ಆದಾಯ ಬರಲಿ ಎಂದು ಕಚೇರಿ ಕೆಳಗಡೆ 7 ಕಮರ್ಷಿಯಲ್ ಶಾಪ್ಗಳನ್ನ ಮಾಡಲಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡು ಕಡಿಮೆ ಬಾಡಿಗೆಗೆ ಕೊಟ್ಟು ಹಣ ಜೇಬಿಗಿಳಿಸುವ ಕೆಲಸ ಅಧಿಕಾರಿಗಳು ಮಾಡ್ತಿದ್ದಾರೆ ಅನ್ನೋ ಆರೋಪ ಇದೆ. ಏಕೆಂದರೆ ಕಲಬುರಗಿ- ಹುಮನಾಬಾದ್ ಮುಖ್ಯ ರಸ್ತೆಯಲ್ಲಿ ಕೆಐಎಡಿಬಿ ಕಮರ್ಷಿಯಲ್ ಶಾಪ್ಗಳು ಇರೋದ್ರಿಂದ ಸಾಕಷ್ಟು ಡಿಮ್ಯಾಂಡ್ ಇದೆ. ಕೆಐಎಡಿಬಿ ಶಾಪ್ಗಳ ಸುತ್ತ ಮುತ್ತಲಿನಲ್ಲಿ ಕನಿಷ್ಠ ಅಂದ್ರು ಒಂದು ಅಂಗಡಿಗೆ ಸುಮಾರು 8-10 ಸಾವಿರ ಬಾಡಿಗೆ ಇದೆ. ಸಾವಿರಾರು ರೂ. ಡಿಪಾಸಿಟ್ ಇದೆ. ಆದ್ರೆ ಕೆಐಎಡಿಬಿ ಅಧಿಕಾರಿಗಳು ಮಾತ್ರ ಒಂದೊಂದು ಅಂಗಡಿಗೂ ಕೇವಲ 2,500 ರೂ. ತಿಂಗಳ ಬಾಡಿಗೆಗೆ ಅಗ್ರಿಮೆಂಟ್ ಮಾಡಿಕೊಟ್ಟು ಇಲಾಖೆಗೆ ನಷ್ಟ ಮಾಡುತ್ತಿದ್ದಾರೆ.
ಒಂದು ವ್ಹೀಲ್ ಅಂಗಡಿಗೆ 4 ಶಾಪ್ಗಳನ್ನು ಬಾಡಿಗೆಗೆ ಕೊಟ್ಟಿದ್ದು, ನಾಲ್ಕು ಶಾಪ್ಗಳು ಸೇರಿ ಕೇವಲ 50 ಸಾವಿರ ಡೆಪಾಸಿಟ್ ಪಡೆದಿದ್ದಾರೆ. ಇದನ್ನೆಲ್ಲಾ ನೋಡಿದ್ರೆ ಅಧಿಕಾರಿಗಳು ಅನಾಮತ್ತಾಗಿ ಜೇಬು ಬಿಸಿ ಮಾಡಿಕೊಂಡು ಕಡಿಮೆ ದರಕ್ಕೆ ಅಂಗಡಿಗಳನ್ನು ಬಾಡಿಗೆಗೆ ಕೊಟ್ಟಿದ್ದಾರೆ ಎಂಬ ಆರೋಪಗಳಿವೆ.
ಫೋನ್ ಮಾಡಿದರೂ ನೋ ರೆಸ್ಪಾನ್ಸ್:
ಈ ವಿಚಾರದಲ್ಲಿ ಮಾಹಿತಿ ಪಡೆಯಲು ಹಲವು ಬಾರಿ ಕಚೇರಿಗೆ ತೆರಳಿದರೂ ಡಿಸ್ಟಿಕ್ ಆಫೀಸರ್ ಪ್ರಕಾಶ್ ಅವರು ಮಾತ್ರ ಲಭ್ಯವಿರಲಿಲ್ಲ. ಅವರಿಗೆ ಹಲವಾರು ಬಾರಿ ಫೋನ್ ಮಾಡಿದ್ರು ನೋ ರೆಸ್ಪಾನ್ಸ್, ಅಲ್ಲದೇ ಕೆಲ ಅಧಿಕಾರಿಗಳು ಸಮಂಜಸ ಉತ್ತರ ಕೊಡದೇ ನುಣುಚಿಕೊಳ್ಳುವ ಪ್ರಯತ್ನ ಮಾಡ್ತಿದ್ದಾರೆ.