ಕಲಬುರಗಿ : ಪ್ರಕೃತಿ ವಿಕೋಪ ನಿರ್ವಹಣೆಯಲ್ಲಿ ಕರ್ತವ್ಯ ಲೋಪ ತೋರಿದ ಅಫಜಲಪುರ ತಹಶೀಲ್ದಾರ್ ಅವರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಮಳೆ ಹಾಗೂ ಭೀಮಾ ನದಿಯ ಪ್ರವಾಹದಿಂದ ಅಫಜಲಪುರ ತಾಲೂಕು ಸಂಪೂರ್ಣ ತತ್ತರಿಸಿ ಹೋಗಿದೆ. ಕೇಂದ್ರ ಸ್ಥಾನದಲ್ಲಿದ್ದುಕೊಂಡು ಸಮರ್ಪಕವಾಗಿ ಕರ್ತವ್ಯ ನಿರ್ವಹಣೆ ಮಾಡಬೇಕಾದ ತಹಶೀಲ್ದಾರ್ ಪ್ರಭಾಕರ ಖಜೂರಿ ಅವರು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡದೆ ಕೇಂದ್ರ ಸ್ಥಾನದಲ್ಲಿ ಗೈರಾಗಿ ಕರ್ತವ್ಯ ಲೋಪ ಎಸಗಿದ್ದಾರೆ ಎಂಬ ಆರೋಪದ ಮೇಲೆ ಅಮಾನತು ಮಾಡಲಾಗಿದೆ.
ಇನ್ನು ಆಳಂದ ತಹಶೀಲ್ದಾರ್ ಯಲ್ಲಪ್ಪ ಸುಬ್ಬೇದಾರ ಅವರಿಗೆ ಅಫಜಲಪುರ ತಾಲೂಕಿನ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ.
ತಹಶೀಲ್ದಾರ್ ಅಲ್ಲದೆ ವಿಲೇಜ್ ಅಕೌಂಟೆಂಟ್ ಭಾಗೇಶ ಯಾಳವಾರ, ಪಿಡಿಓ ಗುರುನಾಥ ಹರಿದಾಸ ಅವರನ್ನು ಕೂಡಾ ಕರ್ತವ್ಯಲೋಪ ಆರೋಪದ ಮೇಲೆ ಅಮಾನತುಗೊಳಿಸಲಾಗಿದೆ.