ಕಲಬುರಗಿ: ಕೇವಲ 1500 ರೂ. ಲಂಚ ಪಡೆಯುವಾಗ ಸಿಕ್ಕಿಬಿದ್ದ ಭ್ರಷ್ಟ ಅಧಿಕಾರಿಗೆ ಏಳು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 20 ಸಾವಿರ ರೂ. ದಂಡ ವಿಧಿಸಿ ನ್ಯಾಯಾಲಯ ಮಹತ್ವದ ತೀರ್ಪು ನೀಡುವ ಮೂಲಕ ಭ್ರಷ್ಟರಿಗೆ ಖಡಕ್ ಸಂದೇಶ ನೀಡಿದೆ.
ಆಳಂದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಗೆಜೆಟೆಡ್ ಮ್ಯಾನೇಜರ್ ಶರಣಪ್ಪ ಹೂಗಾರ ಶಿಕ್ಷೆಗೆ ಗುರಿಯಾದ ಅಧಿಕಾರಿ. ಎರಡನೇ ಹೆರಿಗೆ ಹೋಗಿ ಬಂದಿದ್ದ ಶಿಕ್ಷಕಿಯೋರ್ವರ ರಜೆ ಅವಧಿಯಲ್ಲಿ ತಡೆಹಿಡಿಯಲಾಗಿದ್ದ ವೇತನ ಬಿಲ್ ಮಂಜೂರು ಮಾಡಿಸಿ ಕೊಡಲು 1500 ರೂ. ಲಂಚ್ ಬೇಡಿಕೆ ಇಟ್ಟಿದ್ದ. ಅದರಂತೆ ಕಚೇರಿಯಲ್ಲಿ ಹಣ ಪಡೆಯುತ್ತಿದ್ದಾಗ ಅಧಿಕಾರಿ ರೆಡ್ ಹ್ಯಾಂಡ್ ಸಿಕ್ಕಿ ಬಿದ್ದಿದ್ದನು. 2014ರ ಆ. 20 ರಂದು ಈ ಘಟನೆ ನಡೆದಿತ್ತು.
ಕಲಬುರಗಿ ಪ್ರಧಾನ ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಆರ್.ಜೆ. ಸತೀಶ ಸಿಂಗ್ ವಾದ ಪ್ರತಿವಾದ ಆಲಿಸಿ ಆರೋಪಿ ಭ್ರಷ್ಟ ಅಧಿಕಾರಿ ಶರಣಪ್ಪ ಹೂಗಾರಗೆ ಕಲಂ 7 ಲಂಚ ಪ್ರತಿಬಂಧಕ ಕಾಯ್ದೆ 1988 ಅನ್ವಯ ಹಾಗೂ 13(1)(ಡಿ) ಮತ್ತು 13(2) ಲಂಚ ಪ್ರತಿಬಂಧಕ ಕಾಯ್ದೆ 1988 ಅನ್ವಯ ಏಳು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 20 ಸಾವಿರ ರೂ. ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದ್ದಾರೆ. ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎ.ಎಸ್. ಚಾಂದಕವಟೆ ವಾದ ಮಂಡಿಸಿದ್ದಾರೆ.