ಕಲಬುರಗಿ: ನಗರದ ವಿಮಾನ ನಿಲ್ದಾಣಕ್ಕೆ ಇಂದು ಎರಡನೇ ವರ್ಷದ ಸಂಭ್ರಮ. 2019ರ ನವೆಂಬರ್ 22ರಂದು ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿಲ್ದಾಣಕ್ಕೆ ಚಾಲನೆ ನೀಡಿದ್ದರು.
ಇಲ್ಲಿಂದ ನಿತ್ಯವೂ ಬೆಂಗಳೂರು, ದೆಹಲಿ ಮತ್ತು ತಿರುಪತಿಗೆ ಮೂರು ವಿಮಾನಗಳು ಹಾರಾಟ ನಡೆಸುತ್ತಿವೆ. ಇದುವರೆಗೂ 3,179 ವಿಮಾನಗಳು ಹಾರಾಟ ನಡೆಸಿವೆ. ಜೊತೆಗೆ, 43 ಗಣ್ಯರ ವಿಶೇಷ ವಿಮಾನಗಳು ಹಾಗೂ ಎರಡು ಏರ್ ಆ್ಯಂಬುಲೆನ್ಸ್ಗಳು ಹಾರಾಟ ಮಾಡಿವೆ.
![ಕಲಬುರಗಿ ವಿಮಾನ ನಿಲ್ದಾಣಕ್ಕೆ ಎರಡನೇ ವರ್ಷದ ಸಂಭ್ರಮ](https://etvbharatimages.akamaized.net/etvbharat/prod-images/kn-klb-02-flait-two-years-celebration-ka10021_22112021162505_2211f_1637578505_713.jpg)
ಕಳೆದೆರಡು ವರ್ಷಗಳ ಅವಧಿಯಲ್ಲಿ ವಿಮಾನ ನಿಲ್ದಾಣದಿಂದ 1,26,989 ಪ್ರಯಾಣಿಕರು ವಿಮಾನಯಾನ ಮಾಡಿದ್ದಾರೆ. ಅಲ್ಲದೇ, ಇಲ್ಲಿ ಎರಡು ವಿಮಾನ ಹಾರಾಟ ತರಬೇತಿ ಕೇಂದ್ರಗಳು ಕಾರ್ಯಾರಂಭಿಸಿದ್ದು, ವಿಮಾನ ನಿಲ್ದಾಣದ ಪ್ರಗತಿಗೆ ಸಾಕ್ಷಿ.
ಈ ವಿಮಾನ ನಿಲ್ದಾಣವು ಕಲಬುರಗಿಯವರು ಮಾತ್ರವಲ್ಲದೇ, ಕಲ್ಯಾಣ ಕರ್ನಾಟಕದ ಯಾದಗಿರಿ, ಬೀದರ್, ರಾಯಚೂರು ಹಾಗೂ ವಿಜಯಪುರ ಮಹಾರಾಷ್ಟ್ರದ ಸೊಲ್ಲಾಪುರ, ಲಾತೂರ್ ಭಾಗದ ಜನರಿಗೂ ಅನುಕೂಲವಾಗಿದೆ. ಬೆಂಗಳೂರು ಮತ್ತು ದೆಹಲಿಗೆ ಪ್ರಯಾಣಿಸುವ ಉದ್ದಿಮೆದಾರರು, ವ್ಯಾಪಾರಸ್ಥರು ಹಾಗೂ ವಿದ್ಯಾರ್ಥಿಗಳು ಸಾಮಾನ್ಯ ನಾಗರಿಕರು ಸಹ ವಿಮಾನಯಾನದ ಪ್ರಯೋಜನ ಪಡೆಯುತ್ತಿದ್ದಾರೆ. ಉಡಾನ್ ಯೋಜನೆಯು ಇದಕ್ಕೆ ವರದಾನ.
ಎಲ್ಲಾ ವಿಮಾನಗಳು ಉಡಾನ್ ಯೋಜನೆಯಡಿ ಕಾರ್ಯಾಚರಣೆ ನಡೆಸುತ್ತಿವೆ. ಇದರಿಂದ ಶೇ.50ರಷ್ಟು ಸಿಟ್ಗಳು ಸಾಮಾನ್ಯ ನಾಗರಿಕರಿಗೂ ಅನುಕೂಲವಾಗುವ ರೀತಿಯಲ್ಲಿ ಮೀಸಲಿರುತ್ತವೆ. ಇದಲ್ಲದೆ, ಕೋವಿಡ್ ಸಂದರ್ಭದಲ್ಲಿ ದೇಶದ ಇತರೆ ನಗರಗಳ ವಿಮಾನ ನಿಲ್ದಾಣಗಳಿಗಿಂತಲೂ ಕಲಬುರಗಿ ವಿಮಾನ ನಿಲ್ದಾಣ ಅತ್ಯಂತ ಸಕ್ರಿಯವಾಗಿ ಕಾರ್ಯಾಚರಣೆ ನಡೆಸಿದೆ. ಕೋವಿಡ್ ಲಸಿಕೆಯನ್ನು ಜಿಲ್ಲೆಗೆ ವಿಮಾನದ ಮೂಲಕವೇ ಪೂರೈಕೆ ಮಾಡಲಾಗಿತ್ತು. ಇದುವರೆಗೆ 1,899 ಕೆ.ಜಿಯಷ್ಟು ಲಸಿಕೆ ಬಂದಿದೆ.
ಇನ್ನು, ವಿಮಾನ ಪ್ರಯಾಣಿಕರಿಂದ ಗೋವಾ ಮತ್ತು ಗುಜರಾತ್ನ ಅಹಮದಾಬಾದ್ಗೆ ವಿಮಾನ ಹಾರಾಟ ಪ್ರಾರಂಭಿಸುವಂತೆ ಬೇಡಿಕೆ ಬಂದಿದೆ. ಈ ಎರಡು ಪ್ರದೇಶಕ್ಕೆ ವಿಮಾನ ಹಾರಾಟಕ್ಕೆ ಅನುಮತಿ ನೀಡುವಂತೆ ವಿಮಾನ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ಅಧಿಕಾರಿಗಳು ಹೇಳುತ್ತಾರೆ.