ಕಲಬುರಗಿ: ಜಿಲ್ಲೆಯ ಶಾಸಕರು ಯಡಿಯೂರಪ್ಪ ಅವರಿಗೆ ಬೇಡವಾಗಿದ್ದಾರೆ. ಆ ಕಾರಣಕ್ಕಾಗಿಯೇ ಐವರು ಶಾಸಕರು, ಓರ್ವ ವಿಧಾನ ಪರಿಷತ್ ಸದಸ್ಯರಿದ್ದರೂ, ಯಾರೂ ಸಚಿವರಾಗಿಲ್ಲ ಎಂದು ರಾಜ್ಯಸಭಾ ಮಾಜಿ ಸದಸ್ಯ ಕೆ.ಬಿ.ಶಾಣಪ್ಪ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನೂ ಮೊದಲೇ ಹೇಳಿದ್ದೆ, ಅಲ್ಲಿರೋದು ಬ್ಯಾಡ್ರೋ ಅಂತ. ಆ ಹುಡುಗರು ನನ್ನ ಮಾತು ಕೇಳಲೇ ಇಲ್ಲ, ಈಗ ನೋಡಿ ಯಾರಿಗೂ ಸಚಿವ ಸ್ಥಾನ ನೀಡದೆ ಯಡಿಯೂರಪ್ಪ ಸೇಡು ತೀರಿಸಿಕೊಂಡರು. ನಾಲ್ಕು ಬಾರಿ ಶಾಸಕರಾದ ಸುಭಾಷ್ ಗುತ್ತೇದಾರ್ ಗೆ ಸಚಿವರಾಗೋ ಅರ್ಹತೆ ಇಲ್ಲವೆ. ಎರಡು ಬಾರಿ ಗೆದ್ದ ದತ್ತಾತ್ರೇಯಗೆ ಕೊಡಲು ಸಮಸ್ಯೆಯೇನಿತ್ತು. ಇವರಾರೂ ಯಡಿಯೂರಪ್ಪಗೆ ಬೇಡವಾದವರು. ಆ ಕಾರಣಕ್ಕಾಗಿಯೇ ಸಚಿವ ಸ್ಥಾನ ನೀಡಿಲ್ಲ.
ಆದ್ರೆ ಡಿಸಿಎಂ ಆಗಿರುವ ಲಕ್ಷ್ಮಣ ಸವದಿ ಎಲ್ಲಿಂದ ಗೆದ್ದು ಬಂದಿದ್ದಾರೆ. ಅವರು ಹೇಗೆ ಡಿಸಿಎಂ ಸ್ಥಾನಕ್ಕೆ ಅರ್ಹತೆ ಪಡೆದರು ಎಂದು ಸಿಎಂ ಯಡಿಯೂರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಒಂದು ಕಾಲಕ್ಕೆ ನಾನೂ ಬಿಜೆಪಿಯಲ್ಲಿಯೇ ಇದ್ದೆ. ಅಲ್ಲಿನ ವಾತಾವರಣ ನೋಡಿಯೇ ಪಕ್ಷ ತೊರೆದೆ. ಆ ವೇಳೆ ಅಲ್ಲಿರೋದು ಬ್ಯಾಡ ಅಂತ ಕೆಲ ಶಾಸಕರಿಗೆ ಹೇಳಿದ್ದೆ. ಈಗ ಅವರಿಗೆ ತಪ್ಪಿನ ಅರಿವಾಗಿದೆ. ಮುಂದೊಂದು ದಿನ ಅವರೆಲ್ಲ ಬಿಜೆಪಿ ಬಿಟ್ಟು ಬರೋದು ಗ್ಯಾರಂಟಿ ಎಂದು ಭವಿಷ್ಯ ನುಡಿದರು.