ಕಲಬುರಗಿ: ಅಕ್ರಮವಾಗಿ ಹಣ ಡ್ರಾ ಮಾಡಿ ಸರ್ಕಾರಿ ಬೊಕ್ಕಸಕ್ಕೆ ನಷ್ಟವುಂಟು ಮಾಡಿದ ಆರೋಪದ ಮೇಲೆ ಆರೋಗ್ಯಾಧಿಕಾರಿ ಡಾ.ಸುಶೀಲಕುಮಾರ ಅಂಬೂರೆ ವಿರುದ್ಧ 420 ಪ್ರಕರಣ ದಾಖಲಾಗಿದೆ. ಅಫಜಲಪುರ ತಾಲೂಕು ಗೊಬ್ಬೂರ್ (ಬಿ) ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಬ್ದುಲ್ ಅಜೀಜ್ ನೀಡಿದ ದೂರಿನ ಮೇರೆಗೆ ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸದ್ಯ ಆಳಂದ ತಾಲೂಕಿನ ಆರೋಗ್ಯಾಧಿಕಾರಿಯಾದ ಸುಶೀಲಕುಮಾರ ಅಂಬೂರೆ ಈ ಹಿಂದೆ ಗೊಬ್ಬೂರ್ (ಬಿ) ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಆಗಿದ್ದರು. 2021ರ ಸೆ.16ರಂದು ಇವರು ವರ್ಗಾವಣೆಗೊಂಡು ಡಾ.ಅಜೀಜ್ ನೂತನ ಆಡಳಿತ ಅಧಿಕಾರಿಯಾಗಿ ಆಗಮಿಸಿದ್ದರು. ಹೊಸದಾಗಿ ಅಧಿಕಾರ ವಹಿಸಿಕೊಂಡ ಡಾ.ಅಜೀಜ್ ಅವರಿಗೆ ಅಧಿಕಾರ ಬಿಟ್ಟು ಕೊಡುವ ಬದಲಾಗಿ 2021ರ ಸೆ.25ರ ವರೆಗೆ ಅಧಿಕಾರ ತಮ್ಮ ಬಳಿಯೇ ಇಟ್ಟುಕೊಂಡಿದ್ದರು.
ಅಲ್ಲದೆ ಅಕ್ರಮ ದಾಖಲಾತಿ ಸೃಷ್ಟಿಸಿ, ನೂತನ ಅಧಿಕಾರಿ ಗಮನಕ್ಕೂ ತಾರದೆ ಸೆ.17 ಮತ್ತು 22 ರಂದು ಒಟ್ಟು ನಾಲ್ಕು ಕಂತುಗಳಾಗಿ 2 ಲಕ್ಷ ಹಣ ಡ್ರಾ ಮಾಡಿಕೊಂಡಿದ್ದಾರೆ ಎಂದು ಎಫ್ಐಆರ್ನಲ್ಲಿ ನಮೂದಿಸಲಾಗಿದೆ. ಡಾ.ಸುಶೀಲಕುಮಾರ್ ಅಂಬೂರೆ ವಿರುದ್ಧ 409, 465 ಮತ್ತು 420 ಐಪಿಸಿಯನ್ವಯ ಪ್ರಕರಣ ದಾಖಲಿಸಿಕೊಂಡು, ಗಾಣಗಾಪುರ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಕಲಬುರಗಿ: ಮಧ್ಯಾಹ್ನದ ಬಿಸಿಯೂಟ ಯೋಜನೆಯ ಹಣ ದುರುಪಯೋಗ ಆರೋಪ